

ಮೂಡಿಗೆರೆ: ವರ್ಷ ಪೂರ್ತಿ ಶಾಲೆ, ಕಾಲೇಜಿನಲ್ಲಿ ವಿದ್ಯಾಭ್ಯಾಸ ಕಲಿಯುವ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲಿ ನದಿ,ಕೆರೆಗಳಲ್ಲಿ ಈಜಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳುವುದಕ್ಕಿಂತ ಸಂಘ ಸಂಸ್ಥೆಗಳು ಬೇಸಿಗೆ ಶಿಬಿರ ಆಯೋಜಿಸಿದರೆ ಮಕ್ಕಳಿಗೆ ಸಾಮಾಜಿಕ ಪಾಠ ಕಲಿಸಬಹುದು ಎಂದು ಕಾಫಿನಾಡು ಸಮಾಜ ಸೇವಾ ಸಂಘದ ಅಧ್ಯಕ್ಷ ಹಸೈನಾರ್ ಬಿಳಗುಳ ಹೇಳಿದರು.
ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಾಯ್ಸ್ ಸಂಸ್ಥೆ ಶುಕ್ರವಾರ ಪಟ್ಟಣದ ಲ್ಯಾಂಪ್ಸ್ ಸಹಕಾರ ಸಂಘದ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲಾ, ಕಾಲೇಜುಗಳಿಗೆ ರಜೆ ಸಿಕ್ಕಿದೊಡನೆ ಮಕ್ಕಳು ಮರಕೋತಿ ಆಟ, ಹಲಸು, ಮಾವು, ಕಿತ್ತಾಳೆ, ಸೀಬೆಕಾಯಿ ಸಹಿತ ಇತರೆ ಹಣ್ಣುಗಳನ್ನು ಕೀಳಲು ಮರಕ್ಕೆ ಹತ್ತುವುದರಿಂದ ಅಪಾಯ ತಪ್ಪಿದ್ದಲ್ಲ. ಬೇಸಿಗೆ ರಜೆ ಮುಗಿಯುವಷ್ಟರಲ್ಲಿ ಮರದಿಂದ ಬಿದ್ದು ನೂರಾರು ಮಕ್ಕಳು ಕೈಕಾಲು ಮುರಿತಕ್ಕೊಳಗಾಗುವುದು ಸಾಮಾನ್ಯವಾಗಿದೆ ಎಂದರು.
ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಉಂಟಾಗುತ್ತದೆ. ಇವುಗಳಿಂದ ಹೊರಬಂದು ಮಕ್ಕಳು ಮುಂದಿನ ವರ್ಷದ ಕಲಿಕೆಗೆ ಸಜ್ಜುಗೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮಕ್ಕಳ ಬೇಸಿಗೆ ಶಿಬಿರಗಳನ್ನು ಆಯೋಜಿಸಿದರೆ ಅದರಿಂದ ಸಾಕಷ್ಟು ಮಕ್ಕಳು ತಮ್ಮ ಜವಾಬ್ದಾರಿ ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸಾಹಿತಿ ಎಂ.ಎಸ್.ನಾಗರಾಜ್ ಮಾತನಾಡಿ, ಬೇಸಿಗೆ ರಜೆಯಲ್ಲಿ ಮಕ್ಕಳ ಕಥೆ, ಕವನ, ಪ್ರಬಂಧ, ಕಾದಂಬರಿಗಳನ್ನು ರಚಿಸುವ ಹವ್ಯಾಸ ರೂಢಿಸಿಕೊಳ್ಳಬೇಕು. ದಿನಪತ್ರಿಕೆ, ವಾರಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳಲ್ಲಿರುವ ಸುದ್ದಿಗಳಂತೆ ತಾವು ಕೂಡ ವಿಭಿನ್ನ ರೀತಿಯ ಸುದ್ದಿಗಳನ್ನು ರಚಿಸುವ ಕಲೆ ಕಲಿತುಕೊಳ್ಳಬೇಕು. ಶಾಲಾ, ಕಾಲೇಜು ಕಲಿಕೆ ನಂತರ ಇವೆಲ್ಲವೂ ಜೀವನಕ್ಕೆ ಅಗತ್ಯವಾಗಿರುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ಅಗತ್ಯವಿರುವುದನ್ನು ಮಾತ್ರ ರೂಢಿಸಿಕೊಳ್ಳಬೇಕು. ಶಾಲೆಯಲ್ಲಿ ಶಿಕ್ಷಕರು ವರ್ಷ ಪೂರ್ತಿ ಪಾಠ ಪ್ರವಚನ, ಪ್ರತಿಭಾ ಕಾರಂಜಿ, ಮೆಟ್ರಿಕ್ ಮೇಳ, ಕ್ರೀಡಾಕೂಟ ಮಾತ್ರವಲ್ಲದೆ ಪ್ರವಾಸಕ್ಕೂ ಕರೆದೊಯ್ದು ಮಕ್ಕಳನ್ನು ಸುಸಂಸ್ಕೃತ ನಾಗರಿಕರನ್ನಾಗಿ ತಯಾರು ಮಾಡುತ್ತಾರೆ. ಇವೆಲ್ಲವನ್ನು ರಜಾ ಕಾಲದಲ್ಲಿ ಮರೆತು ಬಿಡಬಾರದು. ಬದಲಿಗೆ ಇನ್ನಷ್ಟು ಹೆಚ್ಚು ಕಲಿಕೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ನಮ್ಮೂರ ಮಕ್ಕಳ ಬರವಣಿಗೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನೃತ್ಯ, ಕಿರು ನಾಟಕ ಏರ್ಪಡಿಸಲಾಗಿತ್ತು. ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ವಿಜಯೇಂದ್ರ, ಸಿಇಒ ಕೃಷ್ಣಪ್ಪ, ಡಾ.ಅನುಷಾ, ಶಿಕ್ಷಕ ಆದಿ, ರಕ್ಷಿತ್ ಬಾಳೂರು, ಅಲ್ವಿನ್, ನವೀನ್ ಆನೆದಿಬ್ಬ, ವಿಜಯಲಕ್ಷ್ಮಿ ಸುನಿತಾ, ಮಧುಚಂದ್ರ, ಉಷಾ, ಮೋನಿಷ, ದೀಕ್ಷಿತ್ ಇದ್ದರು.