

ಮಂಗಳೂರು: ಕರೊನಾ ಕಂಟ್ರೋಲ್ ರೂಂಗೆ ಆಹಾರ ಕಿಟ್‌ಗೆ ಬೇಡಿಕೆ ಸಲ್ಲಿಸಿ ಅಧಿಕ ಕರೆಗಳು ಬರುತ್ತಿವೆ.
ಒಂದು ತಿಂಗಳ ಅವಧಿಯಲ್ಲಿ 4,650ಕ್ಕೂ ಅಧಿಕ ಸಾಮಾನ್ಯ ಕರೆ, 450ಕ್ಕೂ ಅಧಿಕ ಆಂಬ್ಯುಲೆನ್ಸ್‌ಗೆ ಕರೆ, 4,500ಕ್ಕೂ ಅಧಿಕ ವೈದ್ಯಕೀಯ ವ್ಯವಸ್ಥೆಗೆ ತುರ್ತು ಕರೆ, 1,400ಕ್ಕೂ ಅಧಿಕ ವಾಟ್ಸಪ್ ಸಂದೇಶ, 2,450 ಆಹಾರ ಮತ್ತು ಕಿಟ್‌ಗೆ ಸಂಬಂಧಿಸಿದ ಕರೆಗಳು ಈ ಕಂಟ್ರೋಲ್ ರೂಂ ಗೆ ಬಂದಿವೆ. ಎಲ್ಲ ಕರೆಗಳಿಗೂ ಸ್ಪಂದನೆ ನೀಡಲಾಗಿದೆ ಎಂದು ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ಕಂಟ್ರೋಲ್ ರೂಂಗೆ ಕರೆ ಮಾಡಿದರೆ ದಿನಸಿ ಕಿಟ್ ನೀಡುತ್ತಾರೆ ಎಂದು ಸುಳ್ಳು ಸುದ್ದಿಯನ್ನು ವಾಟ್ಸಪ್‌ಗಳಲ್ಲಿ ಪ್ರಸಾರ ಮಾಡಿದ್ದರು. ಇದನ್ನು ನೋಡಿ ನೂರಾರು ಮಂದಿ ಕರೆ ಮಾಡಿ ದಿನಸಿ ಕಿಟ್ ಬಗ್ಗೆ ವಿಚಾರಿಸಿದ್ದಾರೆ ಎಂದು ಅಧಿಕಾರಿಗಳು ವಿಜಯವಾಣಿ ಗೆ ಮಾಹಿತಿ ನೀಡಿದ್ದಾರೆ.
ಉಳಿದಂತೆ, ನಾನಾ ಕಾರಣಗಳನ್ನು ಹೇಳಿಕೊಂಡು ಪಾಸ್ ಪಡೆಯುಲು ಹೆಚ್ಚು ಕರೆ ಬರುತ್ತಿವೆ. ಮಾಹಿತಿ ಸಂಗ್ರಹ ಹಾಗೂ ರವಾನೆಗೆ ಈ ಕೇಂದ್ರದಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಹಿತ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಪುತ್ತೂರು ಸಹಾಯಕ ಆಯುಕ್ತರ ಕಚೇರಿ, ಸಾರಿಗೆ ಇಲಾಖೆಯ ಅಧಿಕಾರಿಗಳು ಇಲ್ಲಿ ಕರೆಗಳನ್ನು ಸ್ವೀಕರಿಸಿ ಜನತೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ನಾಗರಿಕರು ಮನೆಯಲ್ಲೇ ಕುಳಿತು ಟಿಲಿಮೆಡಿಸಿನ್ ಸೌಲಭ್ಯ ಪಡೆಯುತ್ತಿದ್ದಾರೆ.
ಸಾರ್ವಜನಿಕರು ಟೋಲ್‌ಪ್ರೀ ಸಂಖ್ಯೆ 1077ಗೆ ಕರೆ ಮಾಡಬಹುದು. 9483908000ಗೆ ವಾಟ್ಸಪ್ ಸಂದೇಶ ಕಳುಹಿಸುವ ಮೂಲಕವೂ ಸಂಶಯ ನಿವಾರಿಸಿ, ಮಾಹಿತಿ ಪಡೆಯಬಹುದು. ಕರೊನಾ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಕರೆ ಮಾಡಿ ಸಲಹೆ ಪಡೆಯುವಂತೆ ಕೇಂದ್ರದ ಮೇಲ್ವಿಚಾರಣಾಧಿಕಾರಿಯಾಗಿರುವ ಮುಡಾ ಆಯುಕ್ತ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ 2 ಸಾವಿರ ಕರೆ: ಉಡುಪಿಯಲ್ಲಿ ಜಿಲ್ಲಾಡಳಿತದ ಕರೊನಾ ಮೇಲ್ವಿಚಾರಣಾ ಕೇಂದ್ರಕ್ಕೆ ಒಂದು ತಿಂಗಳ ಅವಧಿಯಲ್ಲಿ 2 ಸಾವಿರ ಕರೆಗಳು ಬಂದಿವೆ. ಇಲ್ಲಿ 12 ಸಿಬಂದಿ, 3 ಪಾಳಿಗಳಲ್ಲಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ, ಪೊಲೀಸ್, ಸಾರಿಗೆ, ಕಂದಾಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುತ್ತಿದ್ದಾರೆ. ಆರಂಭದಲ್ಲಿ ಕರೊನಾ ರೋಗ ಲಕ್ಷಣಕ್ಕೆ ಸಂಬಂಧಿಸಿದ ಸಂಶಯಗಳಿಗೆ ಸಂಬಂಧಿಸಿ ಹೆಚ್ಚಿನ ಕರೆಗಳು ಬಂದಿವೆ. ದಿನಸಿ ಸಾಮಗ್ರಿಗಳ ಕಿಟ್ ಕೊಡುವಂತೆ ಸಂಕಷ್ಟದಲ್ಲಿರುವವರಿಂದ ನೂರಾರು ಕರೆಗಳು ಬಂದಿವೆ. ಸ್ಪಂದಿಸಿ ಪೂರೈಕೆ ಮಾಡಲಾಗಿದೆ. ಅಂತರ್ ಜಿಲ್ಲೆಗೆ ಹೋಗಲು ಪಾಸ್ ನೀಡುವಂತೆ ಹಲವು ಬೇಡಿಕೆ ಕರೆಗಳು ಬಂದಿವೆ. ತುರ್ತು ವೈದ್ಯಕೀಯ ಪ್ರಕರಣಗಳಿಗೆ ಮಾತ್ರ ಪಾಸ್ ಕಲ್ಪಿಸಲಾಗಿದೆ. ಪ್ರಸ್ತುತ ಕರೊನಾ ಶಂಕೆಗೆ ಸಂಬಂಧಿಸಿದ ದೂರುಗಳು ಬರುತ್ತಿವೆ. ಸಾರ್ವಜನಿಕರು ಸಂಶಯಗಳಿದ್ದರೆ 9663957222 ಅಥವಾ 966390222ಗೆ ಸಂಪರ್ಕಿಸಬಹುದು ಎಂದು ಮೇಲ್ವಿಚಾರಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ಮೇಲ್ವಿಚಾರಣಾ ಕೇಂದ್ರಕ್ಕೆ ಒಂದು ತಿಂಗಳಲ್ಲಿ 18 ಸಾವಿರಕ್ಕೂ ಅಧಿಕ ಕರೆಗಳು ಬಂದಿವೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಿಂದಲೇ ಶೇ.80ರಷ್ಟು ಕರೆಗಳು ಬಂದಿವೆ. ಆಹಾರ ಕಿಟ್ ಹಾಗೂ ಪಾಸ್‌ಗೆ ಸಂಬಂಧಿಸಿ ಹೆಚ್ಚಿನ ಕರೆಗಳು ಬರುತ್ತಿವೆ. ವಲಸೆ ಕಾರ್ಮಿಕರಿಗೆ ದಿನಸಿ ಸಾಮಗ್ರಿ ಕಿಟ್‌ಗಳನ್ನು ಪೂರೈಸಲಾಗಿದೆ. ಸಿಂಧೂ ಬಿ.ರೂಪೇಶ್ ದ.ಕ.ಜಿಲ್ಲಾಧಿಕಾರಿ