ಸೋಲು-ಗೆಲುವಿನ ಲೆಕ್ಕಾಚಾರ ಆರಂಭ

IMG_20241125_142814
ನಗರಸಭೆ ಕಚೇರಿಯ ನೋಟ.
Published on

ಅರಸೀಕೆರೆ: ಇಲ್ಲಿನ ನಗರಸಭೆಯ ಎಂಟು ವಾರ್ಡ್‌ಗಳ ಉಪ ಚುನಾವಣೆಗೆ ಶನಿವಾರ ಮತದಾನ ನಡೆದಿದ್ದು, ಪ್ರಮುಖ ಮೂರೂ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಎಂಟು ವಾರ್ಡ್‌ಗಳ ಪೈಕಿ ಜೆಡಿಎಸ್ ಆರು, ಕಾಂಗ್ರೆಸ್ ಎಂಟು ಹಾಗೂ ಬಿಜೆಪಿ ನಾಲ್ಕು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್, ಜೆಡಿಎಸ್ ತಲಾ ಮೂರರಿಂದ ನಾಲ್ಕು ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕಂತೇನಹಳ್ಳಿ ಒಂದನೇ ವಾರ್ಡ್‌ನ ಮತಗಟ್ಟೆಯಲ್ಲಿ ಶೇ.85ಕ್ಕೂ ಹೆಚ್ಚು ಮತದಾರರು ಹಕ್ಕು ಚಲಾಯಿಸಿದ್ದರೆ, ವಿದ್ಯಾವಂತರಿಂದಲೇ ತುಂಬಿ ತುಳುಕುತ್ತಿರುವ ಆಡಳಿತ ಸೌಧ ವ್ಯಾಪ್ತಿಗೆ ಬರುವ ಹದಿನೈದನೇ ವಾರ್ಡ್‌ನಲ್ಲಿ ಶೇ.55ರಷ್ಟು ಮತದಾನವಾಗಿದೆ. ಪೇಟೆಬೀದಿ, ಇಂದಿರಾ ನಗರ, ಕಾಳನಕೊಪ್ಪಲು, ಮಲ್ಲೇಶ್ವರ, ಸುಭಾಷ್ನಗರ, ಸುನ್ನಿಚೌಕ ಸೇರಿದಂತೆ ಎಲ್ಲ ವಾರ್ಡ್‌ಗಳಿಂದ ಶೇ.71.58 ಮತದಾನವಾಗಿದೆ.

ಕಂತೇನಹಳ್ಳಿ, ಸರಸ್ವತಿಪುರಂ ವ್ಯಾಪ್ತಿಗೆ ಬರುವ ಒಂದನೇ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಹರ್ಷವರ್ಧನ್ ರಾಜ್ ಹಾಗೂ ಕಾಂಗ್ರೆಸ್‌ನ ಯುವರಾಜ್ ನಡುವೆ ನೇರ ಹಣಾಹಣಿ ನಡೆದಿದ್ದು, ಬಿಜೆಪಿ ನಿರೀಕ್ಷಿತ ಮತ ಗಳಿಕೆ ಮಾಡಿಲ್ಲ ಎನ್ನಲಾಗಿದೆ. ಪೇಟೆ ಬೀದಿ 25ನೇ ವಾರ್ಡ್‌ನಲ್ಲಿ ಸತತ ಐದು ಬಾರಿ ದಾಖಲೆಯ ಗೆಲುವು ಸಾಧಿಸಿರುವ ಬಿ.ಎನ್.ವಿದ್ಯಾಧರ್ ಜೆಡಿಎಸ್ ಹುರಿಯಾಳಾಗಿದ್ದರೆ, ಕಾಂಗ್ರೆಸ್‌ನಿಂದ ದರ್ಶನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

9ನೇ ವಾರ್ಡ್‌ನಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ನಿಕಟ ಸ್ಪರ್ಧೆ ಕಂಡು ಬಂದಿದ್ದರೆ, ಹತ್ತನೇ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗಾಗಿ ಪೈಪೋಟಿ ನಡೆಸಿದ್ದಾರೆ. ಆಡಳಿತ ಸೌಧ ಬಡಾವಣೆಯ ಹದಿನೈದನೇ ವಾರ್ಡ್‌ನಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ಬಿಗ್‌ಪೈಟ್ ಏರ್ಪಟ್ಟಿದ್ದು, ಬಿಜೆಪಿ ಎಷ್ಟು ಮತ ಪಡೆಯಲಿದೆ ಎನ್ನುವ ಲೆಕ್ಕಾಚಾರವಿದೆ. ಶಿವಾನಂದ ಕಾಲನಿ, ಸುಭಾಷ್ ನಗರ ಬಡಾವಣೆಯ ಹದಿನೆಂಟನೇ ವಾರ್ಡ್‌ನಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಸಮಬಲದ ಹೋರಾಟ ನಡೆದಿದೆ.

ಇಂದಿರಾನಗರ, ಚೌಡೇಶ್ವರಿ ನಗರದ ವಾರ್ಡ್‌ನಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ಸಮಬಲದ ಸ್ಪರ್ಧೆ ಕಂಡು ಬಂದಿದ್ದರೂ ಪಕ್ಷೇತರ ಅಭ್ಯರ್ಥಿ ಅಚ್ಚರಿಯ ಗೆಲುವು ದಾಖಲಿಸುವ ಕುರಿತು ಬಿಸಿ ಬಿಸಿ ಚರ್ಚೆ ಎಲ್ಲೆಡೆ ನಡೆದಿದೆ. ಸುನ್ನಿಚೌಕ ವಾರ್ಡ್‌ನಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಕಲಿಗಳ ನಡುವೆ ಜಿದ್ದಾಜಿದ್ದಿ ನಡೆದಿದೆ. ಎಲ್ಲ ಎಂಟೂ ವಾರ್ಡ್‌ನಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎನ್ನುವ ವಿಶ್ವಾಸ ಕೈ ಮುಖಂಡರದ್ದಾಗಿದ್ದರೆ, ನಾಲ್ಕರಿಂದ ಐದು ವಾರ್ಡ್‌ನಲ್ಲಿ ಜೆಡಿಎಸ್ ಗೆಲ್ಲುವ ನಿರೀಕ್ಷೆ ಹೊಂದಿದೆ. ಇನ್ನು ಬಿಜೆಪಿ ಖಾತೆ ತೆರೆಯುವ ಆಶಾವಾದದಲ್ಲಿದ್ದು, ಪಕ್ಷೇತರರು ಕೂಡ ಗೆಲುವು ನಮ್ಮದೇ ಎನ್ನುವ ಅದಮ್ಯ ಆತ್ಮವಿಶ್ವಾಸದಲ್ಲಿರುವುದು ತರಹವೇರಿ ಚರ್ಚೆಗೆ ಗ್ರಾಸವಾಗಿದೆ.

ಬೆಟ್ಟಿಂಗ್: ಎಂಟು ವಾರ್ಡ್‌ಗಳ ಪೈಕಿ ಪೇಟೆ ಬೀದಿ, ಕಂತೇನಹಳ್ಳಿ ಹಾಗೂ ಮಲ್ಲೇಶ್ವರ ಬಡಾವಣೆ ಅಭ್ಯರ್ಥಿಗಳ ಪರ ಭಾರಿ ಬೆಟ್ಟಿಂಗ್ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ ಎಣಿಕೆ ನ.26ರಂದು ಬೆಳಗ್ಗೆ ಎಂಟು ಗಂಟೆಗೆ ತಾಲೂಕು ಕಚೇರಿಗೆ ಹೊಂದಿಕೊಂಡಂತಿರುವ ಕಂದಾಯ ಭವನದಲ್ಲಿ ನಡೆಯಲಿದ್ದು ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಇದರ ನಡುವೆ ಮೂರೂ ಪಕ್ಷಗಳಿಗೂ ಒಳೇಟಿನ ಭೀತಿ ಎದುರಾಗಿದ್ದು, ಆತಂಕದಲ್ಲಿಯೇ ಸಮಯ ಕಳೆಯುವಂತಾಗಿದೆ.

ಕಾಂಗ್ರೆಸ್ ಸರ್ಕಾರದ ಜನಪರ ಕೆಲಸಗಳು ಮತವಾಗಿ ಪರಿವರ್ತನೆ ಆಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಎಂಟು ವಾರ್ಡ್‌ಗಳಲ್ಲಿ ಕೈ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಪಡೆಯಲಿದ್ದಾರೆ. ಜೆಡಿಎಸ್, ಬಿಜೆಪಿ ಪ್ರಚಾರ ವರ್ಕೌಟ್ ಆಗಿಲ್ಲ.

ಮೆಟ್ರೋ ಬಾಬು, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಅರಸೀಕೆರೆ

ನಗರಸಭೆ ಉಪ ಚುನಾವಣೆ ಫಲಿತಾಂಶ ಸಕಾರಾತ್ಮಕವಾಗಿದ್ದು ಜನರು ಜೆಡಿಎಸ್ ಕೈ ಹಿಡಿದಿದ್ದಾರೆ. ಆರು ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಲಿದ್ದಾರೆ. ರಾಜಕೀಯ ವಿರೋಧಿಗಳ ಅಪಪ್ರಚಾರ, ಕುತಂತ್ರ ನಡೆದಿಲ್ಲ. ಸ್ಥಳೀಯ ವಿದ್ಯಮಾನಗಳು ಗೆಲುವಿಗೆ ನೆರವಾಗಿದ್ದು. ನಿರೀಕ್ಷೆಗೂ ಮೀರಿದ ಗೆಲುವು ದೊರೆಯಲಿದೆ.

ಎನ್.ಆರ್.ಸಂತೋಷ್ ಜೆಡಿಎಸ್ ಮುಖಂಡ, ಅರಸೀಕೆರೆ

ನಗರಸಭೆ ಉಪ ಚುನಾವಣೆಯಲ್ಲಿ ಎಂಟು ವಾರ್ಡ್‌ಗಳ ಪೈಕಿ ನಾಲ್ಕರಲ್ಲಿ ಸ್ಪರ್ಧೆ ಮಾಡಿದ್ದೇವೆ. ಸಂಘಟಿತ ಪ್ರಚಾರ ಮಾಡಿದ್ದು ಗೆಲುವಿನ ಖಾತೆ ತೆರೆಯುವ ಆಶಾವಾದ ನಮ್ಮದಾಗಿದೆ. ಮತದಾರರ ತೀರ್ಪು ಸ್ವಾಗತಿಸಲು ಸಿದ್ಧ.

ಚಂದ್ರಶೇಖರ್ ಬಿಜೆಪಿ ಮುಖಂಡ

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net