

*ಅಭ್ಯರ್ಥಿ ಯಾರೆನ್ನುವ ಕುತೂಹಲ
*ಚನ್ನಪಟ್ಟಣಕ್ಕೆ ರಘು ನಂದನ್ ರಾಮಣ್ಣ ಕೈ ಪಾಳಯದ ಹುರಿಯಾಳು
ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯದಲ್ಲಿ ಖಾಲಿ ಇರುವ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಮುಹೂರ್ತ ನಿಗದಿಗೆ ದಿನಗಣನೆ ಆರಂಭಗೊಂಡಿದೆ. ಆದರೆ, ಈಗಾಗಲೇ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎನ್ನುವ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಪಕ್ಷದ ನಾಯಕರು ಮಾಡುತ್ತಿಲ್ಲ.
ಪಕ್ಷಗಳ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ಅಭ್ಯರ್ಥಿ ಯಾರು ಎನ್ನುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಲೇ ಇದ್ದಾರೆ. ಆದರೆ, ಆಯಾ ಪಕ್ಷಗಳ ಕಾರ್ಯಕರ್ತರು ಮಾತ್ರ ತಮ್ಮದೇ ವ್ಯಾಖ್ಯಾನಗಳಲ್ಲಿ ಮುಳುಗಿದ್ದಾರೆ.
ಎನ್ಡಿಎ ಮೈತ್ರಿ ಕೂಟದಿಂದ ಸಿ.ಪಿ. ಯೋಗೇಶ್ವರ್, ನಿಖಿಲ್ ಕುಮಾರಸ್ವಾಮಿ ಹೆಸರು ಚಾಲ್ತಿಯಲ್ಲಿದ್ದರೆ, ಅತ್ತ ಕಾಂಗ್ರೆಸ್ ಅಭ್ಯರ್ಥಿ ತಾನೇ ಎಂದ ಡಿ.ಕೆ.ಶಿವಕುಮಾರ್, ಈಗ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಇದ್ದಾರೆ. ಸದ್ಯಕ್ಕೆ ಚನ್ನಪಟ್ಟಣಕ್ಕೆ ರಘುನಂದನ್ ರಾಮಣ್ಣ ಕೈ ಪಾಳಯದ ಹುರಿಯಾಳು. ಎನ್ಡಿಎ ಅಭ್ಯರ್ಥಿ ಘೋಷಣೆ ನಂತರ ನಿರ್ಧಾರ ಬದಲಾಗುವ ಸಾಧ್ಯತೆಯೂ ಇದೆ.
ದೊಡ್ಡ ರಿಸ್ಕ್ ತೆಗೆದುಕೊಳ್ಳುವರೇ ಎಚ್ಡಿಕೆ ?
ಕಳೆದ ಒಂದು ವಾರದಿಂದ ಎನ್ಡಿಎ ಅಭ್ಯರ್ಥಿ ರೇಸ್ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಎಚ್ಡಿಕೆ ಎಲ್ಲಿಯೂ ಈ ಬಗ್ಗೆ ಖಚಿತ ಪಡಿಸಿಲ್ಲವಾದರೂ, ಇದು ನಿಜವೇ ಆದರೆ ತಮ್ಮ ರಾಜಕೀಯ ಜೀವನದ ದೊಡ್ಡ ರಿಸ್ಕ್ ಆಗಲಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ಉಪಚುನಾವಣೆ ಅಷ್ಟು ಸುಲಭವಾಗಿ ಇಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪಾಲಿಗೆ ನಿರ್ಣಾಯಕವೂ ಆಗಲಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಕಾದಾಟವೇ ಇಲ್ಲಿ ನಡೆಯಲಿದೆ. ಇದರ ನಡುವೆ ನಿಖಿಲ್ ಗೆಲುವು ಅಷ್ಟು ಸುಲಭವಾಗಿಲ್ಲ. ಒಂದು ವೇಳೆ ನಿಖಿಲ್ ಗೆದ್ದರೆ ಎಲ್ಲವೂ ಸಲೀಸು. ಆದರೆ, ಸೋತರೆ ಈಗಾಗಲೇ ಎರಡು ಸೋಲು ಕಂಡಿರುವ ನಿಖಿಲ್ ಮತ್ತು ಜೆಡಿಎಸ್ ಸಂಟನೆ ವಿಚಾರದಲ್ಲಿ ದೊಡ್ಡ ಹಿನ್ನಡೆಯನ್ನು ಎಚ್ಡಿ ಕುಮಾರಸ್ವಾಮಿ ಅವರು ಅನುಭವಿಸಬೇಕಿದೆ. ಅಲ್ಲದೆ, ಕೇಂದ್ರದ ತಮ್ಮ ಮಂತ್ರಿ ಸ್ಥಾನವೂ ಮುಳ್ಳಿನ ಹಾಸಿಗೆ ಆಗಬಹುದು. ಈ ಎಲ್ಲ ಲೆಕ್ಕಾಚಾರಗಳನ್ನು ಎಚ್ಡಿಕೆ ಅಳೆದು ತೂಗಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕೈ ಅಭ್ಯರ್ಥಿ ಬದಲಾಗಬಹುದು
ಚನ್ನಪಟ್ಟಣ ರಣ ಕಣವನ್ನು ಗೆಲ್ಲಲೇಬೇಕು ಎನ್ನುವ ಯಜ್ಞ ಆರಂಭಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕಾರಣ ಅನುಭವದ ಎಲ್ಲಾ ಪಟ್ಟುಗಳನ್ನು ಬಳಕೆ ಮಾಡುತ್ತಿದ್ದಾರೆ. ಅನುದಾನದ ಮಳೆ ಸುರಿಸುವ ಭರವಸೆಗಳನ್ನು ಜನರ ಮುಂದಿಟ್ಟು, ಯಾರೇ ಸ್ಪರ್ಧೆ ಮಾಡಿದರೂ ನಾನೇ ಅಭ್ಯರ್ಥಿ ಎಂದು ಮತ ಹಾಕಿ ಎನ್ನುತ್ತ ಮತದಾರರ ಮನ ಮುಟ್ಟುವ ಯತ್ನದಲ್ಲಿ ಇದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಅವರೇ ಆದರೂ, ಬಿಎಂಐಸಿಪಿಐನ ಅಧ್ಯಕ್ಷರೂ ಆಗಿರುವ ರುನಂದನ್ ರಾಮಣ್ಣ ಅವರನ್ನು ಕಣಕ್ಕೆ ಇಳಿಸಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರೇ ಆದರೆ ಅಂತಿಮ ಕ್ಷಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಕಣಕ್ಕೆ ಇಳಿದರೆ ಅಚ್ಚರಿ ಪಡಬೇಕಿಲ್ಲ.
ಸಿಪಿವೈ ಸ್ಪರ್ಧೆ ಖಚಿತ ಆದರೆ!!??
ಎನ್ಡಿಎ ಅಭ್ಯರ್ಥಿ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಹೆಸರು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರದು. ಒಂದೆಡೆ ಕೇಂದ್ರ ಸಚಿವ ಎಚ್ಡಿಕೆ ಅಭ್ಯರ್ಥಿ ವಿಚಾರದಲ್ಲಿ ಗುಟ್ಟು ಬಿಡದೇ ಇರುವುದು ಯೋಗೇಶ್ವರ್ ಅವರ ತಳಮಳವನ್ನು ಹೆಚ್ಚಿಸಿದೆ. ಟಿಕೆಟ್ಗಾಗಿ ಹಲವು ಬಾರಿ ದೆಹಲಿ ದಂಡಯಾತ್ರೆ ಮಾಡಿ ಬಂದಿರುವ ಅವರು, ಕುಮಾರಸ್ವಾಮಿ ಅವರ ಚನ್ನಪಟ್ಟಣ ಪ್ರವಾಸದ ನಂತರ ಮತ್ತೆ ದೆಹಲಿಗೆ ಹಾರಿದ್ದಾರೆ. ಇಲ್ಲಿ ಮತ್ತೊಮ್ಮೆ ತಮಗೆ ಏಕೆ ಟಿಕೆಟ್ ನೀಡಬೇಕು ಎನ್ನುವ ಬಗ್ಗೆಯೂ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಇದ್ದಾರೆ.
ಕಾಂಗ್ರೆಸ್ನಿಂದ ಬಹುತೇಕ ದೂರ ಸಾಗಿರುವ ಸಿಪಿವೈ ಒಂದು ವೇಳೆ ತಮಗೆ ಮೈತ್ರಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡುವುದು ಖಚಿತ ಎನ್ನುತ್ತದೆ ಅವರ ಆಪ್ತ ಬಳಗ.
ಬಿಜೆಪಿಯದು ಭವಿಷ್ಯದ ಲೆಕ್ಕಾಚಾರ
ಚನ್ನಪಟ್ಟಣ ಸೇರಿ ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಬಿಜೆಪಿ ಪಾಲಿಗೆ ನಿರ್ಣಾಯಕ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿಗೆ ಶಕ್ತಿ ಸಿಗಬೇಕಾದರೆ ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಂದ ಮೂರು ಕ್ಷೇತ್ರಗಳ ಪ್ರತಿ ಮಾಹಿತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಷಾ ಪಡೆದುಕೊಂಡಿರುವ ಜತೆಗೆ, ಪ್ರತ್ಯೇಕವಾಗಿ ಸಮೀೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಕಾಪಾಡಿಕೊಳ್ಳುವ ಜತೆಗೆ ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆಯನ್ನು ರಾಷ್ಟ್ರೀಯ ನಾಯಕರು ಮಾಡಿದ್ದಾರೆ ಎನ್ನಲಾಗಿದ್ದು, ಚುನಾವಣೆ ದಿನಾಂಕ ಘೋಷಣೆ ನಂತರ ಅಭ್ಯರ್ಥಿ ವಿಚಾರದಲ್ಲಿ ಸ್ಪಷ್ಟ ರೂಪ ದೊರೆಯಲಿದೆ.