

ಮೈಸೂರು: ದೀಪಾವಳಿ ಹಬ್ಬದ ಅಂಗವಾಗಿ ಸೋಮವಾರ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಕಂಡು ಬಂತು.
ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ವಾಣಿವಿಲಾಸ ಮಾರುಕಟ್ಟೆ, ಧ್ವನಂತ್ರಿ ರಸ್ತೆ, ಅಗ್ರಹಾರ ವೃತ್ತ, ನಂಜುಮಳಿಗೆ, ಜೆ.ಕೆ. ಮೈದಾನದ ರಸ್ತೆ ಸೇರಿದಂತೆ ನಗರದ ನಾನಾ ರಸ್ತೆ ಹಾಗೂ ರಸ್ತೆ ಬದಿಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಸಾರ್ವಜನಿಕರು ಉತ್ಸಾಹದಲ್ಲಿ ಹಬ್ಬಕ್ಕೆ ಬೇಕಾದ ಹಣ್ಣು, ಹೂ, ತರಕಾರಿ, ಪೂಜಾ ಸಾಮಗ್ರಿ ಖರೀದಿಸಿದರು.
ಹಬ್ಬದ ವೇಳೆ ಮನೆಯನ್ನು ಬೆಳಗುವ ಹಣತೆಗಳಿಗೆ ಎಳ್ಳೆಣ್ಣೆ ಹಾಕಿ ಸಾಲು ಸಾಲಾಗಿ ಜೋಡಿಸಿ ದೀಪ ಬೆಳಗುವುದು ಸಂಪ್ರದಾಯ. ಸದ್ಯ ಮಾರುಕಟ್ಟೆಯಲ್ಲಿರುವ ಪರಿಸರ ಸ್ನೇಹಿ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಿತು. ಹಬ್ಬಕ್ಕೆ ನಾಲ್ಕೈದು ದಿನ ಇರುವಾಗಲೇ ವಿವಿಧ ಬಗೆಯ ಆಕೃತಿಯ ಹಣತೆಗಳು ಮಾರುಕಟ್ಟೆಗೆ ಬಂದಿವೆ.
ಪ್ರಮುಖವಾಗಿ ಶಂಖುವಿನಾಕಾರ, ಆನೆ ಮೇಲಿರುವ ಹಣತೆ, ಒಂಟೆ ಹಣತೆ, ಕುದುರೆ ಮೇಲಿರುವ ಹಣತೆ, ಗಿಳಿ ಮೇಲೆ, ನಕ್ಷತ್ರಾಕಾರ, ಬುಟ್ಟಿಯಾಕಾರ, ಕಮಲ ಹೂವಿನಾಕಾರ, ಗುಲಾಬಿಯಾಕಾರ, ಸ್ತ್ರೀಯರು ಸ್ವಾಗತಿಸುತ್ತಿರುವ ಹಣತೆ, ಪಿಂಗಾಣಿ ಹಣತೆ, ಗ್ಲಾಸ್‌ನಿಂದ ತಯಾರಿಸಿರುವ ಹಣತೆ, ಮಣ್ಣಿನ ಹಣತೆ ಹೀಗೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾದವು.