

ಕೊಳ್ಳೇಗಾಲ: ತಾಲೂಕಿನ ದಾಸನಪುರ ಗ್ರಾಮದ ಬಳಿ ರಸ್ತೆ ಕುಸಿದು ಗುಂಡಿಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಮೈಸೂರು-ಚಾಮರಾಜನಗರ ಜಿಲ್ಲೆಗಳನ್ನು ಸಂಪರ್ಕಸುವ ಅಂತರ್ ಜಿಲ್ಲಾ ಮುಖ್ಯ ರಸ್ತೆ ಇದಾಗಿದೆ. ತಿಂಗಳ ಹಿಂದಷ್ಟೆ ಮೈಸೂರು ಜಿಲ್ಲೆಯ ಕಾವೇರಿಪುರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಆಗಮಿಸುತ್ತಿದ್ದ ಟೈಲ್ಸ್ ತುಂಬಿದ ಲಾರಿ ಎದುರು ಬಂದ ಕಬ್ಬಿನ ಲಾರಿಗೆ ದಾರಿ ಮಾಡಿಕೊಡಲು ರಸ್ತೆಯ ಬದಿಗೆ ಬಂದಾಗ ರಸ್ತೆ ಕುಸಿದು ಗುಂಡಿ ನಿರ್ಮಾಣವಾಗಿತ್ತು. ಇದಾದ ಬಳಿಕ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಆಟೋ ಚಕ್ರವು ಗುಂಡಿಗೆ ಸಿಲುಕಿ ರಸ್ತೆಬದಿಯ ಜಮೀನಿನ ಹಳ್ಳಕ್ಕೆ ಉರುಳಿ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿತ್ತು. ಅಂತೆಯೇ ರಾತ್ರಿ ವೇಳೆ ರಸ್ತೆ ಗುಂಡಿ ಕಾಣಿಸದೆ ಬೈಕ್ ಸವಾರರು ಬಿದ್ದ ಪ್ರಸಂಗಗಳು ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಹಳ್ಳಕ್ಕೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ದಾಸನಪುರ ಮಾರ್ಗದಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಮತ್ತು ಮಂಡ್ಯ ಜಿಲ್ಲೆ ವ್ಯಾಪ್ತಿಯ ಗ್ರಾಮ, ಪಟ್ಟಣಗಳಿಗೆ ಸಂಚರಿಸುವ ಪ್ರಮುಖ ರಸ್ತೆಯಾಗಿದೆ. ಹಾಗಾಗಿ ಗುಂಡಿ ಬಿದ್ದ ರಸ್ತೆಯಿಂದ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ದುರಸ್ತಿ ಮಾಡಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.