ಬಸ್ ನಿಲ್ದಾಣ ಸಂಪರ್ಕ ರಸ್ತೆ ಸಂಪೂರ್ಣ ಹಾಳು

IMG_20240516_180411
ಅರಸೀಕೆರೆ ನಗರದ ಬಸ್ ನಿಲ್ದಾಣದ ಪ್ರವೇಶ ದ್ವಾರದ ರಸ್ತೆ ಸಂಪೂರ್ಣ ಹಾಳಾಗಿರುವುದು.
Published on

ಅರಸೀಕೆರೆ: ನಗರದ ರಾಷ್ಟ್ರೀಯ ಹೆದ್ದಾರಿಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಚಾಲಕರು ಹಾಗೂ ಪ್ರಯಾಣಿಕರನ್ನು ಹೈರಾಣಾಗಿಸಿದೆ.

ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಬೇಲೂರು ಸೇರಿದಂತೆ ವಿವಿಧೆಡೆಗಳಿಂದ ನೂರಾರು ಬಸ್‌ಗಳಲ್ಲಿ ಪ್ರಯಾಣಿಕರು ಬಂದು ಹೋಗುತ್ತಿದ್ದಾರೆ. ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಗುಂಡಿಗಳಿಂದ ಕೂಡಿದ್ದು ವಾಹನ ಚಾಲಕರು ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಕಾರು, ಆಟೋ, ದ್ವಿಚಕ್ರ ವಾಹನ ಸವಾರರು ಬಿದ್ದೆದ್ದು ಆಸ್ಪತ್ರೆಗೆ ಸೇರಿದ್ದಾರೆ. ವೃದ್ಧರು ಜೀವ ಕೈಯಲ್ಲಿಡಿದು ಪ್ರಯಾಣ ಮಾಡುವಂತಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಚರಂಡಿ ಸ್ಲ್ಯಾಬ್ ಅವೈಜ್ಞಾನಿಕವಾಗಿದ್ದು ವಾಹನಗಳು ಸಿಲುಕಿ ಜಖಂಗೊಂಡಿವೆ. ಪರಿಸ್ಥಿತಿ ಹೀಗಿದ್ದರೂ ನಗರಸಭೆ ಆಡಳಿತ ನಿರ್ಲಕ್ಷ್ಯ ತೋರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಮಗೆ ಸಂಬಂಧ ಪಟ್ಟಿಲ್ಲ ಎಂದು ಕೈ ತೊಳೆದುಕೊಂಡು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮೌನಕ್ಕೆ ಜಾರಿದ್ದು ಸಮಸ್ಯೆ ಹೇಳತೀರದಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ಇತ್ತ ಗಮನ ಹರಿಸಿ ಲೋಪ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ವಿವಿಧ ಸಂಘಟನೆಗಳೊಂದಿಗೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಕರವೇ ನಗರಾಧ್ಯಕ್ಷ ಕಿರಣ್‌ಕುಮಾರ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net