ಕಾರಿನ ಮೇಲೆ ಮಗುಚಿ ಬಿದ್ದ ಬಸ್

08 HANUR 3
Published on

ಹನೂರು : ತಾಲೂಕಿನ ಹೊಸದೊಡ್ಡಿ ಸಮೀಪದ ಚಿಕ್ಕರಂಗಶೆಟ್ಟಿ ದೊಡ್ಡಿ ತಿರುವಿನಲ್ಲಿ ಶುಕ್ರವಾರ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಎದುರು ಬರುತ್ತಿದ್ದ ಕಾರಿನ ಮೇಲೆ ಬಸ್ ಮಗುಚಿ ಬಿದ್ದು, 11ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದ ತಾಲೂಕಿನ ರಾಮಾಪುರ ಸಮೀಪದ ಪಳನಿಮೇಡು ಗ್ರಾಮದ ಮೋಹನ್‌ಕುಮಾರ್, ಶ್ರೀನಿವಾಸ್, ಕಲ್ಪನಾ, ವಿಜಯಕುಮಾರ್, ಶರಣ್ಯಾ, ಪ್ರಿಯದರ್ಶಿನಿ, ಸಿದ್ದಯ್ಯ, ವೀರಮ್ಮ ಹಾಗೂ ಬಸ್ಸಿನಲ್ಲಿದ್ದ ಹೊಸದೊಡ್ಡಿಯ ನಿಂಗಶೆಟ್ಟಿ, ನಾಗರಾಜು, ದೇವಮ್ಮ ಹಾಗೂ ಇನ್ನು ನಾಲ್ವರು ಗಾಯಗೊಂಡವರು.

ಘಟನೆ ವಿವರ: ಬೆಳಗ್ಗೆ 9.15ರಲ್ಲಿ ಚಾಲಕ ಸೇರಿದಂತೆ 8 ಜನರು ಪಳನಿಮೇಡು ಗ್ರಾಮದಿಂದ ತಮಿಳುನಾಡಿನ ಬಣ್ಣಾರಿ ಅಮ್ಮನ್ ದೇಗುಲಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಚಿಕ್ಕರಂಗಶೆಟ್ಟಿ ದೊಡ್ಡಿ ತಿರುವಿನಲ್ಲಿ ಎದುರು ಬಂದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಕಾರಿನ ಮೇಲೆ ಮಗುಚಿ ಬಿದ್ದಿದೆ. ಇದರಿಂದ ಕಾರಿನಲ್ಲಿದ್ದ 8 ಜನರಿಗೆ ಹಾಗೂ ಬಸ್ಸಿನಲ್ಲಿದ್ದ 7 ಜನರಿಗೆ ಸಣ್ಣ ಪುಟ್ಟ ಗಾಯವಾಗಿವೆ. ಸ್ಥಳೀಯರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅದೃಷ್ಟವಶಾತ್ ದೊಡ್ಡ ಪ್ರಮಾಣದಲ್ಲಿ ಅವಘಡವಾಗಲಿಲ್ಲ.

ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್, ವೈದ್ಯರಾದ ಡಾ.ರಾಜು, ಡಾ.ಪೃಥ್ವಿ, ಡಾ.ವೈಷ್ಣವಿ, ಡಾ.ಸುನೀತಾ ಅಗತ್ಯ ಚಿಕಿತ್ಸೆ ನೀಡಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸುದ್ದಿ ತಿಳಿದು ಹನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಜಿ ಶಾಸಕ ಭೇಟಿ: ಘಟನೆ ನಡೆದ ಕೂಡಲೇ ಹೊಸದೊಡ್ಡಿ ಗ್ರಾಮದ ಆಪ್ತರೊಬ್ಬರು ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಮಾಹಿತಿ ತಿಳಿಸಿದರು. ಕೂಡಲೇ ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ ಆರ್.ನರೇಂದ್ರ ಅವರು ಗಾಯಾಳುಗಳಿಂದ ಮಾಹಿತಿ ಪಡೆದು ಯೋಗ ಕ್ಷೇಮವನ್ನು ವಿಚಾರಿಸಿದರು. ಈ ವೇಳೆ ಅಗತ್ಯ ಚಿಕಿತ್ಸೆ ನೀಡುವಂತೆ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಅವರಿಗೆ ತಿಳಿಸಿದರು. ಈ ವೇಳೆ ಡಿವೈಎಸ್ಪಿ ಧರ್ಮೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net