

ಬಾಳೆಹೊನ್ನೂರು: ಪೊಲೀಸರಿಗೆ ನೈತಿಕ ಆತ್ಮಸ್ಥೈರ್ಯ ನೀಡುವುದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ ಎಂದು ವಕೀಲ ಎಚ್.ಎಚ್.ಕೃಷ್ಣಮೂರ್ತಿ ಹೇಳಿದರು.
ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಗಡಿಯನ್ನು ಸೈನಿಕರು ಕಾಯುತ್ತಿದ್ದರೆ, ದೇಶದ ಒಳಭಾಗದಲ್ಲಿ ಆಂತರಿಕ ರಕ್ಷಣೆಯನ್ನು ಪೊಲೀಸರು ಮಾಡುತ್ತಿದ್ದಾರೆ. ಹಗಲಿರುಳು ದೇಶದ ಜನ, ಜನರ ಆಸ್ತಿಯನ್ನು ಪೊಲೀಸರು ರಕ್ಷಣೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಪೊಲೀಸರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವ ಜತೆಗೆ ಅವರ ಕುಟುಂಬಸ್ಥರಿಗೂ ನಾವು ನೈತಿಕ ಬೆಂಬಲ ನೀಡಬೇಕು ಎಂದರು.
ದೇಶದಲ್ಲಿ 1959ರಲ್ಲಿ ಚೈನಾ ವಿರೋಧಿಗಳ ಗುಂಪನ್ನು ಸೋಲಿಸಿ ವಾಪಾಸ್ ಕಳುಹಿಸಲಾಗುತ್ತದೆ. ಆ ಸಂದರ್ಭದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳು ಮೃತಪಟ್ಟಿದ್ದು, ಅವರ ಸ್ಮರಣಾರ್ಥ ಅ.21ನ್ನು ಪೊಲೀಸ್ ಸಂಸ್ಮರಣಾ ದಿನವಾಗಿ ಆಚರಿಸಲಾಗುತ್ತಿದೆ. 1962ರಲ್ಲಿ ನಡೆದ ಪೊಲೀಸ್ ಸಮ್ಮೇಳನದಲ್ಲಿ ಸಂಸ್ಮರಣಾ ದಿನ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಪರಾಧ ವಿಭಾಗದ ಪಿಎಸ್‌ಐ ಅಭಿಷೇಕ್ ಮಾತನಾಡಿ, ಪೊಲೀಸ್ ಸಂಸ್ಮರಣಾ ದಿನದ ಸಂದರ್ಭದಲ್ಲಿ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ, ಎಲ್ಲರ ಬೆಂಬಲದಿಂದ ಸಮಾಜದಲ್ಲಿ ಇನ್ನಷ್ಟು ಸೇವೆ ಸಲ್ಲಿಸುವ ಉತ್ಸಾಹ ಇಮ್ಮಡಿಯಾಗಿದೆ ಎಂದರು.