ಆಸ್ತಿ ವಿಭಜನೆಗೆ ಶುಲ್ಕದ ಹೊರೆ

14sirsi1
Published on

ಶಿರಸಿ: ಕುಟುಂಬದ ಆಸ್ತಿ ವಿಭಜನೆ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ವೆ 11-ಇ (ಪ್ರಿ-ಮ್ಯುಟೇಶನ್ ನಕಾಶೆ) ಅರ್ಜಿಗೆ ಮೊದಲಿಗಿಂತ 20 ಪಟ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಇದು ತುಂಡು ಭೂಮಿ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ.

ಅವಿಭಜಿತ ಆಸ್ತಿಯನ್ನು ವಿಭಜಿಸುವ ಸಂದರ್ಭದಲ್ಲಿ ಭೂಮಿಯ ಸರ್ವೆ ಕಾರ್ಯ ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ತಿಂಗಳಿಗೆ ಕನಿಷ್ಠ ನೂರಾರು ಆಸ್ತಿ ವಿಭಜನೆಯಾಗುತ್ತಿವೆ. ಆದರೆ, ಇದುವರೆಗೆ ಮೊದಲ ಅರ್ಜಿಗೆ 1 ಸಾವಿರ ರೂಪಾಯಿ ಹಾಗೂ ಆನಂತರದ ಪ್ರತಿಯೊಂದು ಪಹಣಿ (ಆರ್​ಟಿಸಿ)ಗೆ 100 ರೂ. ನಂತೆ ಪಾವತಿಸಬೇಕಿತ್ತು. ಅಂದರೆ 5 ಆರ್​ಟಿಸಿ ಇರುವ ಭೂಮಿ ಸರ್ವೆಗೆ 1400 ರೂ. ಹಾಗೂ 10 ಆರ್​ಟಿಸಿ ಇದ್ದರೆ 1900 ರೂ. ಆಗುತ್ತಿತ್ತು. ಜ. 1ರಿಂದ ಪಾಲು ಪಟ್ಟಿ (ವಿಭಜನೆ) ಮಾಡಿಕೊಳ್ಳುವ ಪ್ರತಿ ಅರ್ಜಿಗೆ ಸರ್ಕಾರವು 2 ಸಾವಿರ ರೂ. ನಿಗದಿಪಡಿಸಿದೆ. ಇದರ ಪ್ರಕಾರ 5 ಆರ್​ಟಿಸಿ ಇದ್ದರೆ 10 ಸಾವಿರ ರೂ. ಹಾಗೂ 10 ಆರ್​ಟಿಸಿ ಇದ್ದವರು ಸರ್ವೆಗಾಗಿ 20 ಸಾವಿರ ರೂ. ಕಡ್ಡಾಯವಾಗಿ ಪಾವತಿಸಲೇಬೇಕು. ಬಡ ಮತ್ತು ಮಧ್ಯಮ ವರ್ಗದವರಿಗೆ ಇದು ನುಂಗಲಾರದ ತುತ್ತಾಗಿದೆ. ಬಹುತೇಕ ತುಂಡು ಭೂಮಿಯನ್ನೇ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಬಹುದೊಡ್ಡ ಹೊರೆಯಾಗಿದೆ.

ಬಹುತೇಕರದ್ದು ತುಂಡುಭೂಮಿ: ಜಿಲ್ಲೆಯಲ್ಲಿ ಶೇ. 70ಕ್ಕೂ ಹೆಚ್ಚಿನವರು ತುಂಡು ಭೂಮಿಯನ್ನು ಹೊಂದಿದ್ದಾರೆ. ಗುಂಟೆ ಲೆಕ್ಕಾಚಾರದಲ್ಲಿ ಹಲವು ಕುಟುಂಬಗಳ ಆಸ್ತಿಯಿದೆ. ವಾರ್ಷಿಕ ಆದಾಯ 1 ಲಕ್ಷ ರೂ. ಒಳಗಿನ ಸಾವಿರಾರು ಕುಟುಂಬಗಳಿವೆ. ಇದರೊಂದಿಗೆ ಒಂದು ಕುಟುಂಬದ ಆಸ್ತಿಯು ಹತ್ತಾರು ಸರ್ವೆ ನಂಬರ್​ಗಳಲ್ಲಿ ಹಂಚಿ ಹೋಗಿದೆ. ಆಸ್ತಿ ಪಾಲು ಪಟ್ಟಿ ಸಂದರ್ಭ ಕೇವಲ ಸರ್ವೆಗಾಗಿಯೇ ಸಾವಿರಾರು ರೂ. ಹೆಚ್ಚುವರಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರೊಂದಿಗೆ ತತ್ಕಾಲ್ ಪೋಡಿ ಮತ್ತು ಕ್ರಯದ ಸರ್ವೆಗೆ ಅರ್ಜಿ ಶುಲ್ಕವೂ 1200ದಿಂದ 2 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಕೋವಿಡ್ ಕಾರಣದಿಂದ ಆರ್ಥಿಕ ಮುಗ್ಗಟ್ಟಿನೊಂದಿಗೆ ಅತಿವೃಷ್ಟಿ, ಹವಾಮಾನ ವೈಪರೀತ್ಯದಿಂದ ಬೆಳೆ ನಾಶ ಮತ್ತಿತರ ಕಾರಣಗಳಿಗೆ ತುಂಡು ಭೂಮಿ ಮಾಲೀಕರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಇಂಥ ಸ್ಥಿತಿಯಲ್ಲಿ ಹೆಚ್ಚುವರಿ ಶುಲ್ಕ ನಿಗದಿ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net