

ತುಮಕೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮಂಡಿಸಲಿರುವ ಮುಂಗಡಪತ್ರದ ಮೇಲೆ ಜಿಲ್ಲೆಯ ಜನರ ನಿರೀಕ್ಷೆಗಳ 'ಭಾರ' ಇದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಕ್ರೀಡಾ ವಿಶ್ವವಿದ್ಯಾಲಯ, ಸ್ಪೋರ್ಟ್ಸ್ ಹಾಗೂ ಫಿಟ್ನೆಸ್ ಉಪಕರಣಗಳ ಉತ್ಪಾದನಾ ಘಟಕ ಸ್ಥಾಪನೆ ಹಾಗೂ ಇಸ್ರೇಲ್ ಮಾದರಿ ನೀರಾವರಿ ಯೋಜನೆಗಳು ಬಜೆಟ್ ಪುಸ್ತಕದಲ್ಲೇ ಉಳಿದುಬಿಡುತ್ತವೊ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಜಿಲ್ಲೆ ಕೈಗಾರಿಕೆ, ಶಿಕ್ಷಣ ಹಾಗೂ ಔದ್ಯೋಗಿಕ ವಲಯಕ್ಕೆ ಪ್ರಶಸ್ತವಾದ ಸಂಪನ್ಮೂಲಗಳನ್ನು ಹೊಂದಿದ್ದು, ಈ ಹಿಂದೆ ಘೋಷಣೆ ಆಗಿರುವ ಯೋಜನೆಗಳೇ ಇನ್ನೂ ಅನುಷ್ಠಾನಗೊಂಡಿಲ್ಲ. ಈಗ ಮತ್ತೊಂದು ಬಜೆಟ್ ಮಾ.5 ರಂದು ಮಂಡನೆಯಾಗಲಿದೆ.
ಸಹಜವಾಗಿ ಬಿಎಸ್‌ವೈ ಮಂಡಿಸುವ ಬಜೆಟ್ ಮೇಲೆ ಜಿಲ್ಲೆಯ ಜನರ ನಿರೀಕ್ಷೆಗಳು ಹೆಚ್ಚಿದೆ. ಸಂಪುಟದಲ್ಲಿ ಘೋಷಣೆ ಆಗಿರುವ ಯೋಜನೆಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಜತೆಗೆ ಹೊಸ ಕೊಡುಗೆಗಳು ಈ ಬಾರಿ ಸಿಗಬಹುದೆಂದು ಆಸೆಗಣ್ಣಿನಿಂದ ಜನ ಎದುರು ನೋಡುತ್ತಿದ್ದಾರೆ.
ಜಿಲ್ಲೆ ಬಗ್ಗೆ ಅಪಾರ ಪ್ರೀತಿ: ಬಿಎಸ್‌ವೈಗೆ ಜಿಲ್ಲೆ ಬಗ್ಗೆ ಅಪಾರ ಪ್ರೀತಿ ಇದೆ. ನಾಲ್ವರು ಬಿಜೆಪಿ ಶಾಸಕರನ್ನು ಜಿಲ್ಲೆಯ ಜನ ಗೆಲ್ಲಿಸಿಕೊಟ್ಟಿದ್ದಾರೆ. ಜತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನೇ ಸೋಲಿಸಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಜಿಲ್ಲೆಯ ಜನತೆ ಗೆಲ್ಲಿಸಿದ್ದು, ಈ ಋಣಭಾರ ಬಿಎಸ್‌ವೈ ಮೇಲಿದೆ. ಹಾಗಾಗಿ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ವಿವಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ 130 ಕೋಟಿ ರೂಪಾಯಿ ಅನುದಾನಕ್ಕಾಗಿ ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೇಮೆ ನಾಲೆ ಅಭಿವೃದ್ಧಿ, ನೀರಾವರಿ ಯೋಜನೆ, ಕೈಗಾರಿಕಾ ಪ್ರದೇಶ ಅಭಿವೃದ್ಧಿ, ಜವಳಿಪಾರ್ಕ್, ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಹೀಗೆ ಹತ್ತಾರು ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆಗಳಿವೆ.
ಇಎಸ್‌ಐ ಆಸ್ಪತ್ರೆ ಕನಸು: ಕೈಗಾರಿಕಾ ಕ್ರಾಂತಿಯೇ ಜಿಲ್ಲೆಯಲ್ಲಿ ನಡೆಯುತ್ತಿದ್ದು ವಸಂತನರಸಾಪುರದಲ್ಲಿ ದೇಶ-ವಿದೇಶಗಳ ಕೈಗಾರಿಕೆಗಳು ತಲೆಎತ್ತುತ್ತಿವೆ. ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆಯಾದರೂ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ತುಮಕೂರಿನಲ್ಲಿ ಇಲ್ಲವೆಂಬ ಕೊರಗು ಇದೆ. ಕೇಂದ್ರ ನೆರವಿನಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪಿಸಲು ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಜಾಗ, ನೆರವು ನೀಡಲಿದೆಯೇ ಎಂಬ ನಿರೀಕ್ಷೆ ಕಾರ್ಮಿಕರದ್ದಾಗಿದೆ.
ಜಾಕ್‌ಫ್ರೂಟ್ ಪಾರ್ಕ್ : ಸಿದ್ದುಹಲಸು ತಳಿ ಅಭಿವೃದ್ಧಿ ಈಗ ರಾಜ್ಯದೆಲ್ಲೆಡೆ ಗಮನಸೆಳೆದಿದೆ. ಹಾಗಾಗಿ, ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಜಾಕ್‌ಫ್ರೂಟ್ ಪಾರ್ಕ್ ಸ್ಥಾಪನೆಗೆ ಈ ಬಾರಿಯಾದರೂ ಬಜೆಟ್‌ನಲ್ಲಿ ಒತ್ತು ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಚೇಳೂರಿನ ಸಿದ್ದು ಹಲಸು ತಳಿ ಈಗ ಪ್ರಸಿದ್ಧ ಹೊಂದಿದ್ದು ಇಂತಹ ತಳಿಗಳ ಅಭಿವೃದ್ಧಿಗೆ ಒತ್ತುಕೊಡುವ ಪ್ರಯತ್ನವಾಗಿದೆ. ಕೇರಳದಲ್ಲಿ ಹಲಸಿನ ಹಣ್ಣನ್ನು ರಾಜ್ಯದ ಹಣ್ಣನ್ನಾಗಿ ಘೋಷಿಸಲಾಗಿದೆ. ನಮ್ಮಲ್ಲಿ ಹಲಸಿನ ಹಣ್ಣಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಪ್ರಯತ್ನ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರ ಇತ್ತ ಗಮನಹರಿಸಬೇಕಿದೆ.
ಮಧುಗಿರಿ ಜಿಲ್ಲೆ ಕೂಗು! : ಲೋಕಸಭಾ ಚುನಾವಣೆ ವೇಳೆ ಬಹಿರಂಗವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರ ವಿರುದ್ಧ ಸೆಡ್ಡು ಹೊಡೆದಿದ್ದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮೇಲೆ ಬಿಎಸ್‌ವೈಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ, ಮಧುಗಿರಿಯನ್ನು ಜಿಲ್ಲೆಯಾಗಿ ಘೋಷಿಸಬೇಕೆಂಬ ಕೂಗಿಗೆ ಮತ್ತೆ ಬಲಬಂದಿದೆ.
ಮೆಡಿಕಲ್ ಕಾಲೇಜು: ಈ ಹಿಂದೆ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಣೆ ಆಗಿತ್ತು. ಅದು ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಪ್ರಭಾವಿ ರಾಜಕಾರಣಿಗಳಿಂದಾಗಿ ಹಳ್ಳಹಿಡಿದಿತ್ತು. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ತಾಪ ಮಾಡಿರುವುದು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಮತ್ತೆ ಮೆಡಿಕಲ್ ಕಾಲೇಜಿನ ಕನಸು ಬಿತ್ತಿದೆ.
ತೆಂಗಿಗೆ ಕಾಯಕಲ್ಪ : ಕಲ್ಪತರು ನಾಡಿನಲ್ಲಿ ಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ಪುನಶ್ಚೇತನಕ್ಕೆ ಪ್ರತೀ ಬಜೆಟ್ ಬಂದಾಗ ದೊಡ್ಡಮಟ್ಟದ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಆದರೆ, ಯಾವ ಬಜೆಟ್‌ನಲ್ಲೂ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವಾಗಿಲ್ಲ. ಜತೆಗೆ ನೀರಾ ಪಾರ್ಕ್ ಸ್ಥಾಪನೆ ಬಗ್ಗೆಯೂ ರೈತರ ಒತ್ತಡವಿದೆ.