

ಹುಬ್ಬಳ್ಳಿ: ಬುದ್ಧಿ ಹೇಳಿದ ಯುವತಿ ತಾಯಿಗೆ ಚಾಕುವಿನಿಂದ ಇರಿದ ಯುವಕನನ್ನು ವಶಕ್ಕೆ ಪಡೆದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ವಿಚಾರಣೆಗೆಂದು ಕರೆದೊಯ್ದಿದ್ದರು. ಈ ವೇಳೆ ಹಲ್ಲೆಗೆ ಯತ್ನಿಸಿದ್ದರಿಂದ ಯುವಕನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಬುಧವಾರ ನಡೆದಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ, ಯುವಕ ಮಹೇಶ ಮೇಟಿ (24) ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿ ಹಲ್ಲೆ ನಡೆಸಿದ್ದರಿಂದ ಇನ್‌ಸ್ಪೆಕ್ಟರ್ ಸುರೇಶ ಹಾಗೂ ಪೇದೆ ನಾಗಪ್ಪ ಲಮಾಣಿ ಗಾಯಗೊಂಡಿದ್ದಾರೆ. ಆರೋಪಿ ಸಹಿತ ಮೂವರನ್ನು ಇಲ್ಲಿಯ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆ ಏನು?: ‘ನನ್ನನ್ನು ಮದುವೆಯಾಗು’ ಎಂದು ಚುಡಾಯಿಸುತ್ತಿದ್ದ ಯುವಕನಿಗೆ ಬುದ್ಧಿ ಹೇಳಿದ್ದಕ್ಕೆ ಯುವತಿ ತಾಯಿಗೆ ಮಹೇಶ ಮೇಟಿ ಇಲ್ಲಿಯ ಲೋಹಿಯಾನಗರದಲ್ಲಿ ಬುಧವಾರ ಸಂಜೆ ಚಾಕುವಿನಿಂದ ಇರಿದಿದ್ದ.
ಮಹೇಶ ಮೇಟಿ ಐದು ವರ್ಷದಿಂದ ‘ನನ್ನನ್ನು ಲವ್ ಮಾಡು, ಮದುವೆಯಾಗು’ ಎಂದು ಯುವತಿಯನ್ನು ಬಲವಂತ ಮಾಡುತ್ತಿದ್ದ. ಆಕೆ ಹೋದ ಕಡೆಯಲ್ಲೆಲ್ಲ ದುಂಬಾಲು ಬೀಳುತ್ತಿದ್ದ. ಬುಧವಾರ ಏಕಾಏಕಿ ಯುವತಿಗೆ ಮನೆಗೆ ಬಂದಿರುವ ಮಹೇಶನಿಗೆ ಯುವತಿ ತಾಯಿ ನೀಲಾ ಹಂಪಣ್ಣವರ (50)ಬುದ್ಧಿ ಮಾತು ಹೇಳಿದ್ದಾರೆ. ಇದರಿಂದ ಕೋಪಗೊಂಡು ನೀಲಾ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಸುತ್ತಲೂ ಜನ ಸೇರಿದಾಗ ನಿಮ್ಮನ್ನೂ ಜೀವ ಸಹಿತ ಬಿಡುವುದಿಲ್ಲ ಎಂದಾಗ, ಜನ ಹೆದರಿ ದೂರ ಸರಿದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಮಹೇಶ ಪರಾರಿಯಾಗಿದ್ದ. ಆದರೆ, ಪೊಲೀಸರು ಬೀಸಿದ ಬಲೆಗೆ ಒಂದೇ ಗಂಟೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಇನ್ನಷ್ಟು ಗೆಳೆಯರು ಇದ್ದಾರೆ ತೋರಿಸುವೆ ಎಂದು ಮಹೇಶ ಪೊಲೀಸರಿಗೆ ಹೇಳಿದ್ದ. ಹಾಗಾಗಿ ಹೊರಗಡೆ ಕರೆದುಕೊಂಡು ಹೋಗಲಾಗಿತ್ತು. ವಿಚಾರಣೆ ನಡೆಸುವ ವೇಳೆ ಪುಂಡಾಟ ನಡೆಸಿದ್ದರಿಂದ ಪೊಲೀಸರು ಗುಂಡು ಹಾರಿಸಿದ್ದಾರೆ. ಚಾಕು ಇರಿತಕ್ಕೀಡಾಗಿರುವ ನೀಲಾಗೆ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ಸಿ.ಆರ್. ರವೀಶ, ಮಹಾನಿಂಗ ನಂದಗಾಂವಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ‘ನೀಲಾ ಮಗಳಿಗೆ ಮಹೇಶ ಮದುವೆಯಾಗು, ಲವ್ ಮಾಡು ಎಂದು ಬಲವಂತ ಮಾಡುತ್ತಿದ್ದ. ಆಕೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದ. ಬುಧವಾರ ಸಂಜೆ ಮನೆಗೆ ಬಂದಿದ್ದ ಮಹೇಶನಿಗೆ ಬುದ್ಧಿ ಹೇಳಿದ ನೀಲಾಗೆ ಚಾಕು ಇರಿದಿದ್ದ. ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುವ ವೇಳೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಸುರೇಶ ಯಳ್ಳೂರ ಅವರು ಮಹೇಶನ ಕಾಲಿಗೆ ಗುಂಡು ಹಾರಿಸಿದ್ದಾರೆ. ಯುವತಿ ಮನೆಗೆ ತೆರಳುವ ಮುನ್ನ ಮಹೇಶ 20 ಸಾವಿರ ರೂ. ತನ್ನ ಸ್ನೇಹಿತರಿಂದ ಸಾಲ ಪಡೆದಿದ್ದ. ಯಾಕೆಂದು ಕೇಳಿದಾಗ ಇವತ್ತು ಆಕೆಯನ್ನು ಮದುವೆ ಆಗುವೆ ಇಲ್ಲವಾದರೆ ಮುಗಿಸುವೆ ಎಂದಿದ್ದ ಎಂಬ ಪ್ರಾಥಮಿಕ ಮಾಹಿತಿ ಇದೆ. ಇನ್ನಷ್ಟು ಜನರನ್ನು ವಿಚಾರಣೆಗೊಳಪಡಿಸಲಾಗುವುದು ಎಂದರು.
ಕೆಎಂಸಿಆರ್‌ಐ ಆರ್‌ಎಂಒ ಡಾ. ಸಿದ್ದೇಶ್ವರ ಕಟಕೋಳ ಮಾತನಾಡಿ, ‘ನೀಲಾ ಅವರ ಸಣ್ಣ ಕರಳಿಗೆ ಚಾಕುವಿನಿಂದ ಪೆಟ್ಟು ಬಿದ್ದಿದೆ. ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ತೀವ್ರ ನಿಗಾ ವಹಿಸಲಾಗುತ್ತಿದೆ’ ಎಂದರು.