

ಇಂಡಿ: ಉತ್ತರ ಕರ್ನಾಟಕದ ರೈತರ ಮೊದಲ ಹಬ್ಬ ಕಾರಹುಣ್ಣಿಮೆ ನಿಮಿತ್ತ ಮಂಗಳವಾರ ರೈತರು ತಮ್ಮ ಎತ್ತುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎತ್ತುಗಳಿಗೆ ಅಲಂಕರಿಸುವ ಮಗಡ, ಮುಗಧಾರ, ಕೊರಳಲ್ಲಿ ಕಟ್ಟುವ ಲಡ್ಡು, ಕೋಡಿಗೆ ಅಲಂಕರಿಸುವ ಗೊಂಡೆ, ಗಾಡಿಗೆ ಅಲಂಕರಿಸುವ ವಿವಿಧ ಶೃಂಗಾರ ಸಾಮಾನುಗಳ ಖರೀದಿ ಜೋರಾಗಿ ನಡೆಯಿತು.
ಕರಿಹರಿಯುವ ವಿಶೇಷ ಹಬ್ಬ: ಕಾರ ಹುಣ್ಣಿಮೆ ದಿನ ಸಂಜೆ ಅಲಂಕಾರಗೊಳಿಸಿದ ಜೋಡೆತ್ತುಗಳನ್ನು ಗ್ರಾಮದಲ್ಲಿ ತಂದು ಅಗಸಿಗೆ ಕಟ್ಟಿರುವ ಬೇವಿನ ತಪ್ಪಲಿನ ತೋರಣ ಹರಿದುಕೊಂಡು ಮುನ್ನುಗ್ಗುವ ಆಟ ಇದಾಗಿದ್ದು, ಯಾವ ಎತ್ತು ಮೊದಲು ಕರಿಹರಿಯುವುದೋ ಆ ಎತ್ತಿಗೆ ಬಹುಮಾನ ವಿತರಿಸಲಾಗುತ್ತಿದೆ. ಈ ಆಟಕ್ಕೆ ರೈತರು ತಮ್ಮ ಎತ್ತುಗಳೊಂದಿಗೆ ಅಗಸಿಗೆ ಬಂದು ಅವುಗಳಿಗೆ ಹುರಿದುಂಬಿಸಿ ಓಡಿಸುತ್ತಾರೆ. ರೈತರ ಹಬ್ಬವಾದ ಕಾರಹುಣ್ಣಿಮೆ ಜೂ. 11 ರಂದು ಆಚರಿಸಲಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಗಾಡಿ (ಬಂಡಿ) ಅಲಂಕರಿಸಿ, ಅದಕ್ಕೆ ಎತ್ತುಗಳನ್ನು ಕಟ್ಟಿ ಓಡಿಸುವ ಸಂಪ್ರದಾಯವೂ ಇದೆ.
ಕೃಷಿ ಕೆಲಸಕ್ಕೆ ಬಳಸುವ ವಸ್ತುಗಳ ಪೂಜೆ: ಉಳುಮೆಗೆ ಬಳಸುವ ನೇಗಿಲು, ಕುಂಟೆ, ಗಾಡಿ, ಬಾರಕೋಲು ಮತ್ತು ಇನ್ನಿತರ ಸಾಮಾನುಗಳಿಗೆ ಹುರಮಂಜು ಇಲ್ಲವೆ ಗುಲಾಲು ಹಚ್ಚಿ ಸಿಂಗರಿಸಿ ಪೂಜೆ ಮಾಡಲಾಗುತ್ತದೆ.
ಪ್ರಸಕ್ತ ವರ್ಷ ಬಿತ್ತನೆಗೆ ಅಗತ್ಯವಿದ್ದಷ್ಟು ತೇವಾಂಶವಾಗಿದ್ದು, ಹೆಚ್ಚಿನ ರೈತರು ಹಬ್ಬದ ದಿನದಂದೇ ಮುಂಗಾರು ಬಿತ್ತನೆಗೆ ಚಾಲನೆ ನೀಡಲಿದ್ದಾರೆ.
ಕೃಷಿಗೆ ಬಳಸುವ ರೈತ ಮಿತ್ರ ಎತ್ತುಗಳನ್ನು ಸಿಂಗರಿಸಿ, ಪೂಜಿಸಿ ಅವುಗಳಿಂದ ಕೃಷಿ ಕಾರ್ಯ ಮಾಡಿಸುವ ಕಾರಹುಣ್ಣಿಮೆಗೆ ಪ್ರಸಕ್ತ ವರ್ಷದ ಮಳೆ ಕಳೆ ತಂದಿದೆ.
| ಪ್ರಗತಿಪರ ರೈತ ಎಸ್.ಟಿ. ಪಾಟೀಲ ನಾದ (ಬಿಕೆ)