ಜೈನ ಮುನಿಗಳ ದಾರುಣ ಹತ್ಯೆ ವಿಷಾದನೀಯ

Jss
Published on

ಜೈನ ಮುನಿಗಳ ದಾರುಣ ಹತ್ಯೆಗೆ ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹಿರೇಕೋಡಿಯ ನಂದಿಪರ್ವತ ಆಶ್ರಮದ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯ ಸುದ್ದಿ ಆಘಾತ ಉಂಟುಮಾಡುವುದಾಗಿದೆ. 25 ವರ್ಷಗಳ ಸನ್ಯಾಸ ಜೀವನ ನಡೆಸಿದ ಶ್ರೀಗಳಿಗೆ ಇಂಥ ದಾರುಣ ಅಂತ್ಯ. ಅದೂ ಅವರ ಸಮೀಪದವರಿಂದಲೇ ಆಗಿದೆ. ಅಹಿಂಸಾವ್ರತವನ್ನು ಬೋಧಿಸುವ, ಪಾಲಿಸುವ ಇಂಥ ಸನ್ಯಾಸಿಗಳನ್ನೇ ಕೊಲೆ ಮಾಡುವಂಥ ಮನಃಸ್ಥಿತಿ ದುಃಖಕರವಾದುದು.

ಸರ್ಕಾರವು ಕೂಲಂಕಷ ತನಿಖೆ ನಡೆಸಿ ಈ ದೌರ್ಜನ್ಯ ಎಸಗಿರುವವರ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಮುಂದೆ ಇಂಥ ಕೃತ್ಯಗಳಿಗೆ ಅವಕಾಶವಾಗದಂತೆ ಗಮನಹರಿಸಿ, ಅಗತ್ಯವಾದೆಡೆಗಳಿಗೆ ಸೂಕ್ತ ಬಂದೋಬಸ್ತು ನೀಡಿ ರಾಜ್ಯದಲ್ಲಿ ಶಾಂತಿಯಿಂದ ಬದುಕುವುದಕ್ಕೆ ಸೂಕ್ತ ವಾತಾವರಣ ನಿರ್ಮಿಸಬೇಕಾದುದು ಅಗತ್ಯ.

ದಿವಂಗತರ ಆತ್ಮಕ್ಕೆ ಶಾಂತಿಯನ್ನು, ರಾಜ್ಯದ ಎಲ್ಲ ಜೈನ ಬಂಧುಗಳಿಗೆ-ವಿಶೇಷವಾಗಿ ಅವರ ಭಕ್ತಸಮುದಾಯಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತ, ಈ ದುಃಖದ ಸಮಯದಲ್ಲಿ ಜೈನ ಬಂಧುಗಳೊಂದಿಗಿದ್ದೇವೆಂದು ತಿಳಿಸಬಯಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net