ಬೈಕ್ ಸಮೇತ ನದಿಗೆ ಬಿದ್ದ ಸಹೋದರರು

Screenshot_2024-08-06-23-43-59-86.jpg
Published on

ಬೆಳಗಾವಿ: ತಾಲೂಕಿನ ಬಿ.ಕೆ.ಕಂಗ್ರಾಳಿ ಗ್ರಾಮದ ಬಳಿ ಶನಿವಾರ ರಾತ್ರಿ ಕ್ಷೌರ ಮಾಡಿಸಿಕೊಂಡು ಬೈಕ್‌ನಲ್ಲಿ ಹೊರಟಿದ್ದ ಇಬ್ಬರು ಸಹೋದರರು ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಈಜಿ ದಡ ಸೇರಿದ್ದಾನೆ. ಬೆಳಗಾವಿ ತಾಲೂಕಿನ ಅಳತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23) ಮೃತ. ಜ್ಯೋತಿನಾಥ ಪಾಟೀಲ ಈಜಿ ದಡ ಸೇರಿದ್ದಾನೆ. ಅಳತಗಾ ಗ್ರಾಮದಿಂದ ಬಿ.ಕೆ. ಕಂಗ್ರಾಳಿಗೆ ಕಟಿಂಗ್ ಮಾಡಿಸಲು ಬೈಕ್‌ನಲ್ಲಿ ತೆರಳಿದ್ದ ಸಹೋದರರು ಅಲ್ಲಿಂದ ಮರಳುವಾಗ ದುರ್ಘಟನೆ ಸಂಭವಿಸಿದೆ. ಬಿ.ಕೆ.ಕಂಗ್ರಾಳಿ ಬಳಿ ಮಾರ್ಕಂಡೇಯ ನದಿ ಸೇತುವೆ ದಾಟುವಾಗ ನಿಯಂತ್ರಣ ತಪ್ಪಿ ಬೈಕ್ ಸಮೇತ ನದಿಗೆ ಬಿದ್ದಿದ್ದಾರೆ. ನೋಡ ನೋಡುತ್ತಿದ್ದಂತೆ ಓಂಕಾರ ಪಾಟೀಲ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸಹೋದರ ಜ್ಯೋತಿನಾಥ ಗಿಡ-ಗಂಟಿ ಹಿಡಿದುಕೊಂಡು ಹರಸಾಹಸ ಮಾಡಿ ಈಜಿ ದಡ ತಲುಪಿದ್ದಾರೆ. ಕೊಚ್ಚಿ ಹೋಗಿದ್ದ ಓಂಕಾರ ಪಾಟೀಲಗಾಗಿ ಶನಿವಾರ ರಾತ್ರಿಯಿಂದಲೇ ಕಾಕತಿ ಠಾಣೆ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡದವರು ಶೋಧ ಕಾರ್ಯ ನಡೆಸಿದ್ದರು. ಭಾನುವಾರ ಮಧ್ಯಾಹ್ನ ಓಂಕಾರ ಪಾಟೀಲ ಶವ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net