

ಬಾಗೇಪಲ್ಲಿ: ಟೊಮ್ಯಾಟೊ ಬೆಲೆ ಮತ್ತು ತೂಕದಲ್ಲಿನ ವ್ಯತ್ಯಾಸದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಯ ಕೆಲ ದಲ್ಲಾಳಿಗಳು ರೈತನನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ.
ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿಯ ಶ್ರೀನಿವಾಸಯ್ಯ ಹಲ್ಲೆಗೊಳಗಾದವರು. ಆರೋಪಿಗಳಾದ ಮಧುವಾಣಿ ಟ್ರೇಡರ್ಸ್, ಸಿ.ವೈ.ಎನ್ ಮತ್ತು ಬಿ.ಎನ್.ವಿ ಟ್ರೇಡರ್ಸ್ ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ಶ್ರೀನಿವಾಸಯ್ಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಬಾಗೇಪಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿವೈಎನ್ ಟೊಮ್ಯಾಟೊ ಮಂಡಿಗೆ 104 ಬಾಕ್ಸ್‌ಗಳನ್ನು ಮಾರಲು ತಂದಿದ್ದೆ. ಮಂಡಿಯ ದಲ್ಲಾಳಿಗಳೇ ಹರಾಜು ಪ್ರಾರಂಭಿಸಿ, ಒಂದು ಬಾಕ್ಸ್‌ಗೆ 950 ರೂ. ನಿಗದಿಪಡಿಸಿ ಚೀಟಿ ನೀಡಿದರು. ಆದರೆ, ಹಣ ಕೇಳಿದಾಗ ಹರಾಜಿಗೆ ಮೊದಲು ಮೂರು ಬಾಕ್ಸ್, ಬಳಿಕ ನಾಲ್ಕು ಬಾಕ್ಸ್ ಕಡಿಮೆ ಲೆಕ್ಕ ಹೇಳಿದ್ದಲ್ಲದೆ ಒಂದು ಬಾಕ್ಸ್‌ಗೆ 50 ರೂ. ಕಡಿಮೆ ಮಾಡಿ 100 ರೂ.ಗೆ 10 ರೂ. ಕಮಿಷನ್ ಕಡಿತಗೊಳಿಸಿ ಬಿಲ್ ಕೊಟ್ಟರು. ಇದನ್ನು ಪ್ರಶ್ನಿಸಿದಾಗ ಏಕಾಏಕಿ ಅಟ್ಟಾಡಿಸಿಕೊಂಡು ಬಂದು ಹೊಡೆದರು ಎಂದು ಶ್ರೀನಿವಾಸಯ್ಯ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರತಿಭಟನೆ: ಇದರಿಂದ ಆಕ್ರೋಶಗೊಂಡ ರೈತರು, ರೈತ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಾಯಕ ಕಾರ್ಯದರ್ಶಿ ಕಚೇರಿ ಮುಂಭಾಗದಲ್ಲಿ ಶನಿವಾರ ಧರಣಿ ನಡೆಸಿದರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮಾರುಕಟ್ಟೆಯ ಬಾಗಿಲು ಮುಚ್ಚಿ ಘೋಷಣೆಗಳನ್ನು ಕೂಗಿದರು. ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ನಾಗರಾಜು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಮಾನತ್ ಅದೇಶ: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಉಲ್ಲಂಘಿಸಿರುವ ಮಧುವಾಣಿ ಟ್ರೇಡರ್ಸ್ ಪರವಾನಗಿಯನ್ನು ಅಮಾನತು ಮಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿ.ರಾಮದಾಸು ಆದೇಶ ಹೊರಡಿಸಿದ್ದಾರೆ. ಮಂಡಿ ಮಾಲೀಕ ಎನ್.ಕೃಷ್ಣಪ್ಪ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಕೃಷಿ ವ್ಯಾಪಾರ ವಹಿವಾಟು ನಡೆಸದಂತೆ ಅಂಗಡಿ ಬಾಗಿಲಿಗೆ ಅಮಾನತ್ ಆದೇಶದ ಚೀಟಿ ಅಂಟಿಸಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರೈತರಿಂದ 100 ರೂ. ಹಣಕಾಸಿನ ವಹಿವಾಟುಗೆ 10 ರೂ. ಕಮಿಷನ್ ಪಡೆಯುತ್ತಿರುವ, ಬಾಕ್ಸ್‌ಗಳ ಲೆಕ್ಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ರೈತರು ದೂರು ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಕೆ.ಆರ್.ಅಂಜಿನಪ್ಪ, ಉಪಾಧ್ಯಕ್ಷ ಎಪಿಎಂಸಿ ಮಾರುಕಟ್ಟೆ ಸಮಿತಿ, ಬಾಗೇಪಲ್ಲಿ. ಮಾರುಕಟ್ಟೆಯಲ್ಲಿ ಹರಾಜಿನ ಸಂದರ್ಭದಲ್ಲಿ ಬಿಲ್ ಮತ್ತು ಬಾಕ್ಸ್‌ಗಳ ಲೆಕ್ಕದಲ್ಲಿ ವಂಚಿಸಲಾಗುತ್ತಿದೆ. ಇದನ್ನು ನ್ಯಾಯಯುತವಾಗಿ ಪ್ರಶ್ನಿಸಿದಾಗ ದಲ್ಲಾಳಿಗಳು ರೌಡಿಗಳಂತೆ ಅಟ್ಟಾಡಿಸಿಕೊಂಡು ಬಂದು ಹೊಡೆಯುತ್ತಾರೆ. ರೈತರ ಮೇಲೆ ದಬ್ಬಾಳಿಕೆ ನಡೆಸಿ, ಅಪಮಾನ ಮಾಡಿರುವ ದಲ್ಲಾಳಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಶ್ರೀನಿವಾಸಯ್ಯ, ರೈತ, ಬೆಣ್ಣೆಪರ್ತಿ