ದಲ್ಲಾಳಿಗಳಿಂದ ಶೋಷಣೆ ತಪ್ಪಿಸಿ

IMG-20201121-WA0030
Published on

ಮಂಡ್ಯ: ಕ್ವಿಂಟಾಲ್ ಭತ್ತಕ್ಕೆ 300 ರೂಗಳ ಪ್ರೋತ್ಸಾಹಧನ ನೀಡುವುದರ ಜತೆಗೆ ವರ್ಷ ಪೂರ್ತಿ ಖರೀದಿ ಪ್ರಕ್ರಿಯೆ ನಡೆಯಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಗ್ರಹಿಸಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಕಳೆದ ಸಾಲಿನಲ್ಲಿ ಘೋಷಿಸಿದ ಕ್ವಿಂಟಾಲ್ ಭತ್ತಕ್ಕೆ 200 ರೂ ಪ್ರೋತ್ಸಾಹಧನ ಪಾವತಿಸಬೇಕು. ಪ್ರಮುಖವಾಗಿ ಹೊರ ರಾಜ್ಯದಿಂದ ಬರುತ್ತಿರುವ ಭತ್ತ ಕಟಾವು ಯಂತ್ರಕ್ಕೆ ಗಂಟೆವಾರು ಬಾಡಿಗೆ ನಿಗದಿಗೊಳಿಸಬೇಕು. ಇಲ್ಲದಿದ್ದರೆ ಈಗಾಗಲೇ ದಲ್ಲಾಳಿಗಳು ತಮ್ಮಗಿಷ್ಟ ಬಂದಂತೆ ಹಣ ನಿಗದಿ ಮಾಡುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 8 ರಿಂದ 10 ಜಿಲ್ಲೆಗಳಲ್ಲಿ ಪಡಿತರಕ್ಕೆ ಆಗುವಂತಹ ಭತ್ತ ಬೆಳೆಯುತ್ತಾರೆ. ಇಲ್ಲಿನ ಭತ್ತವನ್ನು ಖರೀದಿಸಿದರೆ ರೈತರಿಗೂ ಅನುಕೂಲವಾಗುತ್ತದೆ. ಆದರೆ ಸರ್ಕಾರ ಬೇರೆ ರಾಜ್ಯಗಳಿಂದ ಹೆಚ್ಚು ಬೆಲೆ ನೀಡಿ ಭತ್ತ ಖರೀದಿ ಮಾಡುವ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿದ ಅವರು, ಇನ್ನಾದರೂ ಇಂತಹ ರೈತ ವಿರೋಧಿ ನೀತಿಗಳನ್ನು ಬಿಡಬೇಕು. ಅಂತೆಯೆ ಪ್ರತಿ ಎಕರೆಗೆ 16 ರಿಂದ 40 ಕ್ವಿಂಟಾಲ್‌ನಂತೆ ಭತ್ತ ಖರೀದಿಸುವ ನೀತಿ ರದ್ದುಗೊಳಿಸಿ 35 ರಿಂದ 40 ಕ್ವಿಂಟಾಲ್ ಖರೀದಿಸಬೇಕು ಎಂದರು.
ಮೈಷುಗರ್ ಕಾರ್ಖಾನೆ ಆರಂಭಿಸುವ ಸಂಬಂಧ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಕಾರ್ಖಾನೆಗಳಿಗೆ ಸರಬರಾಜು ಮಾಡಿರುವ ಕಬ್ಬು ಬೆಳೆಗಾರರಿಗೆ ತ್ವರಿತವಾಗಿ ಹಣ ಪಾವತಿಸಬೇಕು. ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್, ಕಾರ್ಮಿಕ ಕಾನೂನಿಗಳ ಕಾಯ್ದೆಗೆ ತಿದ್ದುಪಡಿ ತಂದಿರುವ ಆದೇಶವನ್ನು ಹಿಂಪಡೆಯಬೇಕು. ನಾಗಮಂಗಲ ತಾಲೂಕು ಬೆಳ್ಳೂರು ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳುವ ಆದೇಶವನ್ನು ರದ್ದುಗೊಳಿಸಬೇಕು. ಇನ್ನು ಜಾತಿಗೊಂದು ಪ್ರಾಧಿಕಾರ ರಚಿಸುವುದನ್ನು ಬಿಟ್ಟು ರೈತ ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಇದರಿಂದ ಎಲ್ಲ ಜಾತಿ ಮತ್ತು ವರ್ಗದವರಿಗೂ ಅನುಕೂಲವಾಗಲಿದೆ ಎಂದರು.
ಪಾಂಡವಪುರ ತಾಲೂಕು ಅಧ್ಯಕ್ಷ ಹರೀಶ್, ಜಿ.ಎಸ್.ಲಿಂಗಪ್ಪಾಜಿ, ಎಸ್.ಕೆ.ರವಿಕುಮಾರ್, ರಾಮಕೃಷ್ಣಯ್ಯ, ಬಾಲಕೃಷ್ಣ, ಶಂಕರಯ್ಯ, ಸೀತಾರಾಮು, ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net