ಡಿಸೆಂಬರ್‌ಗೆ ಸೇತುವೆ ಕಾಮಗಾರಿ ಪೂರ್ಣ

The bridge work will be completed by December
Published on

ಮಹಾಲಿಂಗಪುರ: ಆಸಂಗಿ ಹತ್ತಿರದ ಕೃಷ್ಣ ಮತ್ತು ಢವಳೇಶ್ವರ ಘಟಪ್ರಭಾ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಸೇತುವೆಗಳು ಸೇರಿ ರಾಜ್ಯದಲ್ಲಿ ಒಟ್ಟು 31 ಸೇತುವೆಗಳ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಡ್ಜ್ ಕಾಮಗಾರಿಗಳ ವಿಳಂಬಕ್ಕೆ ಶಾಸಕರ ಮರು ಯೋಜನೆಯ ನೀಲನಕ್ಷೆ, ಕೋವಿಡ್ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆಗಳು ಕಾರಣ ಎಂದರು.

ರಬಕವಿ-ಜಾಂಬೋಟಿ, ಅರಭಾವಿ-ಲೋಕಾಪುರ ಹೆದ್ದಾರಿ ಕಾಮಗಾರಿ ಆರಂಭವಾದಂತೆ, ಮಮದಾಪೂರ, ಬೆಟಗೇರಿ ಮಾರ್ಗವಾಗಿ ವಿಶೇಷ ಯೋಜನೆ ರೂಪಿಸಿ ರಬಕವಿ-ಜತ್ತ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಳೆಗಾಲ ಆರಂಭಕ್ಕೆ ಮೂರು ತಿಂಗಳಿದೆ. ಮುಂದಿನ ದಿನಗಳಲ್ಲಿ ತೊಂದರೆ ಉದ್ಭವವಾಗದಂತೆ ನೀರನ್ನು ಸಂರಕ್ಷಣೆ ಮಾಡಬೇಕು. ಈಗ ಹರಿಸಿದ ನೀರು ಕೊನೆ ಹಂತದವರೆಗೆ ಸರಿಯಾಗಿ ಮುಟ್ಟಲು ನೀರಾವರಿ, ಪೊಲೀಸ್ ಮತ್ತು ಕೆಇಬಿ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ನಮ್ಮ ಸರ್ಕಾರದಲ್ಲಿ ವಿದ್ಯುತ್ ಮತ್ತು ಹಾಲಿನ ದರ ಮಾತ್ರ ಏರಿಕೆಯಾಗಿದೆ. ಹಾಲಿನ ದರ ಏರಿಸಿದರೂ ಲಾಭ ರೈತರಿಗೆ, ಸರ್ಕಾರಕ್ಕೆ ಅದರಿಂದ ಎಳ್ಳಷ್ಟೂ ಲಾಭವಿಲ್ಲ. ಉಳಿದಂತೆ ವಿದ್ಯುತ್ ತನ್ನದೇ ಆದ ಅಥಾರಿಟಿ ಹೊಂದಿದ್ದು, ಅದು ದರ ಪರಿಷ್ಕರಣೆ ಮಾಡಿದೆ. ಈ ರೀತಿಯ ಏರಿಕೆ ಭಾಜಪ ಸರ್ಕಾರವಿದ್ದಾಗಲೂ ಆಗಿದೆ. ಈಗ ಅವರು ಪ್ರತಿಭಟನೆ ಮಾಡುವುದು ಸಮಂಜಸವಲ್ಲ ಎಂದರು.

ತಾಪಂ ಮತ್ತು ಜಿಪಂ ಚುನಾವಣೆ ವ್ಯಾಜ್ಯ ಕೋರ್ಟ್‌ನಲ್ಲಿದೆ. ಕೋರ್ಟ್ ಸರ್ಕಾರಕ್ಕೆ ಯಾವ ರೀತಿ ಆದೇಶ ಮಾಡುತ್ತದೆ ಅದರಂತೆ ನಡೆಯಬೇಕಿದೆ ಎಂದರು.

ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ದೇವಳ ದೇಸಾಯಿ, ರಂಗನಗೌಡ ಪಾಟೀಲ್, ಮಹಾದೇವ ಮಾರಾಪೂರ, ಮಲ್ಲಪ್ಪ ಸಿಂಗಾಡಿ, ದುಂಡಪ್ಪ ಜಾಧವ, ಭೀಮಪ್ಪ ಸಸಾಲಟ್ಟಿ, ನಾಗೇಶ ಗಸ್ತಿ, ಅಶೋಕ ತಳವಾರ, ರಾಜು ಮುಲ್ಲಾ, ಮುನ್ನಾ ಐನಾಪೂರ,ಹಣಮಂತ ಉಳ್ಳಾಗಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net