ಆರು ವರ್ಷವಾದರೂ ಮುಗಿದಿಲ್ಲ ಸೇತುವೆ ಕಾಮಗಾರಿ, ತಪ್ಪಿಲ್ಲ ಜನರ ಗೋಳು

IMG20240725115932.jpg
Published on

ಜಗದೀಶ ಹೊಂಬಳಿ ಬೆಳಗಾವಿ

ಮಳೆ ಬಂದಾಗೊಮ್ಮೆ ರಾಯಬಾಗ ತಾಲೂಕಿನ ಕುಡಚಿಯಲ್ಲಿರುವ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಕೃಷ್ಣಾ ನದಿಯ ಸೇತುವೆ ಮುಳುಗಡೆಯಾಗಿ ಸ್ಥಳೀಯರಿಗೆ ಆಗುತ್ತಿರುವ ತೊಂದರೆಗೆ ಕೊನೆಯೇ ಇಲ್ಲದಂತಾಗಿದೆ.

ಮಳೆ ಹೆಚ್ಚಾದರೆ ಸಾಕು ಈ ಸೇತುವೆ ಮುಳುಗಿ ಇಲ್ಲಿನ ಜನಜೀವನವನ್ನೇ ಅಸ್ತವ್ಯಸ್ತ ಮಾಡುತ್ತಿದೆ. ಕುಡಚಿ, ಅಥಣಿ, ಕಾಗವಾಡ ಸೇರಿ ಸುತ್ತಲಿನ ಪ್ರದೇಶ ಹಾಗೂ ಬಾಗಲಕೋಟೆ ಜಿಲ್ಲೆಯ ತೇರದಾಳ, ಜಮಖಂಡಿ ಭಾಗದ ಶೇ. 70 ಜನರು ಮೀರಜ್ ಆಸ್ಪತ್ರೆಗಳ ಮೇಲೆ ಅವಲಂಬಿಲಿಸಿದ್ದಾರೆ. ಮೀರಜ್‌ಗೆ ಹೋಗಬೇಕಂದರೆ ಈ ರಸ್ತೆ ಮೂಲಕವೇ ಹೋಗಬೇಕು. ಆದರೆ ಮಳೆಗಾಲದಲ್ಲಿ ಇಲ್ಲಿನ ಸೇತುವೆ ಮುಳುಗಿ ಜನಸಂಚಾರವೇ ಕಡಿತವಾಗುತ್ತದೆ.

ಇನ್ನೂ ಮುಗಿದಿಲ್ಲ ಸೇತುವೆ ಕಾಮಗಾರಿ:

ಸೇತುವೆ ಮುಳುಗಡೆಯಿಂದ ಆಗುತ್ತಿರುವ ತೊಂದರೆ ನಿವಾರಿಸುವುದಕ್ಕೆ 2018ರಲ್ಲಿ ಆರಂಭಿಸಿರುವ 'ಎತ್ತರದ ಹೊಸ ಸೇತುವೆ' ನಿರ್ಮಾಣ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. 2021ರಲ್ಲೇ ಸೇತುವೆ ಪೂರ್ಣಗೊಳಿಸುವುದಕ್ಕೆ ಗಡುವು ವಿಧಿಸಲಾಗಿತ್ತು. 6 ವರ್ಷವಾದರೂ ಸೇತುವೆ ನಿರ್ಮಾಣಗೊಂಡಿಲ್ಲ. ಸೇತುವೆ ನಿರ್ಮಾಣವಾದರೆ ಮಳೆಗಾಲದಲ್ಲೂ ಸಂಚಾರಕ್ಕೆ ಅನಕೂಲವಾಗುತ್ತದೆ. ಆದರೆ, ಅಧಿಕಾರಿಗಳ ನಿಷ್ಕಾಳಜಿ, ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. 2018ರಲ್ಲೇ ಟೆಂಡರ್ ಆಗಿರುವ ಕಾಮಗಾರಿ 38 ಕೋಟಿ ರೂ. ಅಂದಾಜು ವೆಚ್ಚ ಹೊಂದಿದೆ.

ನೆಪ ಹೇಳುವ ಅಧಿಕಾರಿಗಳು:

ಕಾಮಗಾರಿ ಮುಗಿಸಲು ಈಗಲೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, 2019ರಲ್ಲಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿತ್ತು. ಕರೊನಾ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸಲು ಆಗಲಿಲ್ಲವೆಂದು ಸಬೂಬು ಹೇಳುತ್ತಿದ್ದಾರೆ. ಈಗ ಕಾಮಗಾರಿ ಕೊನೆ ಹಂತಕ್ಕೆ ಬಂದಿದ್ದು, ಇದೇ ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

160 ಬಸ್ ಗಳು ಬಂದ್!:

ಈ ಸೇತುವೆ ಮುಳುಗಡೆಯಿಂದ ಕರ್ನಾಟಕ, ಮಹಾರಾಷ್ಟ್ರದ ಸುಮಾರು 160 ಬಸ್‌ಗಳ ಸಂಚಾರ ಬಂದ್ ಆಗಿದೆ. ಕುಡಚಿ, ಶಿರಗೂರ, ಗುಂಡವಾಡ ಸೇರಿ ಸುತ್ತಲಿನ ಜನರು ಮಹಾರಾಷ್ಟ್ರ ಕೈಗಾರಿಕಾ ಪ್ರದೇಶಕ್ಕೆ ದುಡಿಯುವುದಕ್ಕೆ ಹೋಗುವುದಕ್ಕೆ ಅಡೆತಡೆಯಾಗಿದೆ. ಕುಡಚಿಯಿಂದ ರೈಲ್ವೆ ಮೂಲಕ ಮಿರಜ್‌ಗೆ ತಲುಪಿ, ಅಲ್ಲಿಂದ ಕಾರ್ಖಾನೆಗಳಿಗೆ ತಲುಪುತ್ತಿದ್ದಾರೆಯಾದರೂ ನಿಯಮಿತವಾಗಿ ರೈಲುಗಳು ಲಭ್ಯವಿಲ್ಲ.

ಅಲ್ಲದೆ ಈ ರಸ್ತೆಯು ಬಾಗಲಕೋಟೆ ಜಿಲ್ಲೆಯಿಂದ ಮಹಾರಾಷ್ಟ್ರ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಈ ಮೂಲಕ ಬಾಗಲಕೋಟೆಯಿಂದ ಮಹಾರಾಷ್ಟ್ರಗೆ ಸಿಮೆಂಟ್ ಸೇರಿ ವಿವಿಧ ಸಾಮಗ್ರಿಗಳನ್ನು ಸಾಗಿಸಲಾಗುತ್ತದೆ. ಕುಡಚಿ ಮೇಲೆ ಹೋದರೆ 40 ಕಿಮೀಗೆ ಮಹಾರಾಷ್ಟ್ರ ತಲುಪುತ್ತಾರೆ. ಸೇತುವೆ ಮುಳುಗಿದರೆ ಹಾರೋಗೇರಿ, ಅಥಣಿ, ಕಾಗವಾಡಕ್ಕೆ ಬಂದು 100 ಕಿ.ಮೀ. ಸುತ್ತು ಹೊಡೆಯಬೇಕಾದ ದುಃಸ್ಥಿತಿ ಎದುರಾಗುತ್ತದೆ.

ಕಳೆದ ಎಂಟು ವರ್ಷಗಳಿಂದ ಜಿಲ್ಲೆಯಲ್ಲಿ ಸೇತುವೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ವರ್ಷದ ಅಂತ್ಯಕ್ಕೆ ಕುಡುಚಿ ಸೇತುವೆ ಕಾಮಗಾರಿ ಮುಗಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

--

ಸೇತುವೆ ಮುಳುಗಡೆಯಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಹೊಸ ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಸೇತುವೆ ಬೇಗ ಮುಗಿಸಿದರೆ ಕುಡಚಿ ಹಾಗೂ ಸುತ್ತಲಿನ ಜನರಿಗೆ ಅನುಕೂಲವಾಗುತ್ತದೆ. ವಿಳಂಬ ಮಾಡದೆ ಕಾಮಗಾರಿ ಮುಗಿಸಲಿ.

- ದೇವೇಂದ್ರ ಶಿರಕೆ, ಕುಡಚಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net