

ಅಳ್ನಾವರ: ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ಹುಲಿಕೇರಿಯ ಇಂದಿರಮ್ಮನ ಕೆರೆ ಕೋಡಿ ಬಿದ್ದಿದ್ದರಿಂದ ಹರಿದು ಬರುತ್ತಿರುವ ನೀರು ಹಾಗೂ ಖಾನಾಪುರ ತಾಲೂಕಿನ ತಾವರಗಟ್ಟಿ, ಬಾಳಗುಂದ ಭಾಗದ ಅರಣ್ಯ ಪ್ರದೇಶದಲ್ಲಿನ ಮಳೆಯ ನೀರು ಪಟ್ಟಣದ ಡೌಗಿ ನಾಲೆಗೆ ಹರಿದು ಬರುತ್ತಿದೆ. ಪರಿಣಾಮ ಪುರ ಗ್ರಾಮದ ಸಂಪರ್ಕ ಸೇತುವೆಯ ದಂಡೆಯಲ್ಲಿ ಮಣ್ಣು ಕುಸಿತಗೊಂಡಿದೆ.
ಗೋದಗೇರಿ, ಪುರ ಗ್ರಾಮದಿಂದ ಶಾಲಾ ಕಾಲೇಜುಗಳಿಗೆ ಪಟ್ಟಣಕ್ಕೆ ನಿತ್ಯ ಹಲವಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಜತೆಗೆ ರೈತರು ಹೊಲಗಳಿಗೆ ಹೋಗಲು ಹಾಗೂ ಕಬ್ಬು ಇತರೆ ಕೃಷಿ ಬೆಳೆಗಳ ವಾಹನಗಳ ಸಾಗಾಣಿಕೆಗೂ ಇದೊಂದೆ ಮಾರ್ಗ ಇರುವುದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಂಭಾವ್ಯ ಅನಾಹುತ ತಡೆಗಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.