

ಗುಳೇದಗುಡ್ಡ: ಕಾನನದ ಮಧ್ಯದೊಳಗೊಂದು ನೀರಿನ ಆರ್ಭಟ..... ಎತ್ತ ನೋಡಿದರು ಹಚ್ಚಹಸಿರಿನ ಸಿರಿ.... ನಿಶಬ್ಧ ವಾತಾವರಣದಲ್ಲಿ ಮುಂದೆ ತೆರಳಿದರೆ ತೆರೆದುಕೊಳ್ಳುವುದೇ ಕಣ್ಮನ ಸೆಳೆಯುವ ಜಲಪಾತ.....!
ಇದು ತಾಲೂಕಿನ ಹಾನಾಪುರ ಎಸ್‌ಪಿ ಗ್ರಾಮದ ಗುಡ್ಡದ ಹಾಲಹಂಡೆ ಜಲಪಾತದ ದೃಶ್ಯ. 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ ಪ್ರವಾಸಿಗರನ್ನು ಸೆಳೆಯುತ್ತಿದೆ.
ಹಾನಾಪೂರ ಎಸ್.ಪಿ. ಗ್ರಾಮದಿಂದ 1 ಕಿ.ಮೀ. ದೂರದಲ್ಲಿರುವ ಈ ಹಾಲಹಂಡೆ ಜಲಪಾತ ಅದ್ಭುತವಾಗಿದೆ. ಈ ಜಾಗಕ್ಕೆ ಭೇಟಿ ನೀಡಿದರೆ ಮಲೆನಾಡಿಗೆ ಬಂದ ಅನುಭವವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಇಂತಹ ಸೊಬಗು ಕಂಡು ಮೂಕವಿಸ್ಮಿತವಾಗುವುದು ಖಂಡಿತ.
ಮಳೆಗಾಲದಲ್ಲಿ ಮಾತ್ರ ತನ್ನ ಸೌಂದರ್ಯವನ್ನು ತೋರಿಸುವ ಈ ಜಲಪಾತ ನಿಸರ್ಗ ಪ್ರಿಯರನ್ನು ತೃಪ್ತಿ ಪಡಿಸುತ್ತದೆ. ಉತ್ತಮವಾಗಿ ಮಳೆಯಾದರೆ ಸಾಕು ಇದರ ವೈಯಾರ ಹೆಚ್ಚುತ್ತದೆ. ಪ್ರವಾಸಿಗರ ಕಣ್ಣಿಗೂ ಕಾಣದೇ ಇದ್ದ ಜಲಪಾತಕ್ಕೆ ಈಗ ಹೋಗಲು ಮಾರ್ಗವಿದೆ. ಕೆಳಗಡೆ ಈಜಲು ಹೊಂಡದಂತೆ ಸ್ಥಳವಿದೆ. ಜಲಪಾತ ಕಡೆ ಅಲ್ಲಲ್ಲಿ ಕೆಲವು ಬೃಹತ್ ಗಾತ್ರದ ಕಲ್ಲುಗಳಿದ್ದು, ನೀರಿನ ಕೆಳಗೆ ಕುಳಿತು ಜಪ ಮಾಡಲೆಂದು ಯಾರೊ ಹಾಕಿದ್ದಾರೇನೋ ಎನ್ನುವ ರೀತಿಯಲ್ಲಿ ಅವುಗಳು ಕಾಣಸಿಗುತ್ತವೆ.
ಈ ಸುಂದರ ನಿಸರ್ಗ ರಮಣೀಯ ಸ್ಥಳಕ್ಕೆ ಗುಳೇದಗುಡ್ಡದಿಂದ ಹಾನಾಪುರ ಎಸ್‌ಪಿ ಗ್ರಾಮದ ಶಾಲೆಯ ಬಲ ಭಾಗದ ರಸ್ತೆಯಿಂದ 15-20 ನಿಮಿಷ ನಡೆದು ಮೂರಾಲ್ಕು ಹೊಲಗಳನ್ನು ದಾಟಿ ಸ್ವಲ್ಪ ದೂರ ಗುಡ್ಡದಲ್ಲಿ ಹಾಲ ಹಂಡೆ ಜಲಪಾತ ಕಣ್ಣಿಗೆ ಗೋಚರಿಸುತ್ತದೆ. ಗಂಜಿಗೇರಿ ಕೆರೆಯಿಂದಲೂ ಈ ಜಲಪಾತಕ್ಕೆ ಹೋಗಬಹುದು ಆದರೆ, ಈ ಗಂಜಿಗೇರಿ ಕೆರೆಯಿಂದ ಬರುವುದು ಕಷ್ಟ. ಅಲ್ಲದೇ ಗಂಜಿಗೇರಿ ಕೆರೆಯವರೆಗೆ ಮಾತ್ರ ವಾಹನಗಳು ಹೋಗುತ್ತವೆ. ಅಲ್ಲಿಂದ ಗುಡ್ಡದಲ್ಲಿ ನಡೆದು 1-2 ಕಿಮೀ ಸಂಚರಿಸಬೇಕಾಗುತ್ತದೆ.