

ಹಿರೇಕೆರೂರ: ದೇಶದ ವೀರ ಯೋಧರ ತ್ಯಾಗ-ಬಲಿದಾನದಿಂದ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶ ವಿಜಯ ಸಾಧಿಸಿದ್ದನ್ನು ನಾವ್ಯಾರೂ ಮರೆಯುವಂತಿಲ್ಲ ಎಂದು ತಹಸೀಲ್ದಾರ್ ಎಚ್. ಪ್ರಭಾಕರಗೌಡ ಹೇಳಿದರು.
ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತ ಪಟ್ಟಣದ ಸಿ.ಇ.ಎಸ್. ವಿದ್ಯಾಸಂಸ್ಥೆ, ಮಾಜಿ ಯೋಧರ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವೀರ ಯೋಧರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತೀವ್ರ ಮತ್ತು ಸುದೀರ್ಘವಾದ ಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯ ಮತ್ತು ತ್ಯಾಗ ಮೆಚ್ಚುವಂತಹದ್ದು. ವೀರಾವೇಶದಿಂದ ಹೋರಾಡಿದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಲು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸುವ ಮೂಲಕ ಸ್ಮರಿಸಲಾಗುತ್ತಿದೆ ಎಂದರು.
ಸಿಪಿಐ ಬಸವರಾಜ ಮಾತನಾಡಿ, ವಿಶ್ವದ ಬಲಿಷ್ಠ ಮಿಲಿಟರಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ಈ ದೇಶ ನನಗೇನು ಕೊಟ್ಟಿದೆ ಎಂಬುದು ಮುಖ್ಯವಲ್ಲ, ನಾನು ಈ ದೇಶಕ್ಕೆ ಏನು ಕೊಟ್ಟಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ವೀರ ಯೋಧರಂತೆ ಹೋರಾಡಿ ದೇಶದ ಋಣ ತೀರಿಸಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮಾತನಾಡಿ, ನಮ್ಮ ದೇಶದ ಸೈನಿಕರ ತ್ಯಾಗ, ಬಲಿದಾನದ ಫಲವಾಗಿ ನಾವು ಇಂದು ಸುರಕ್ಷಿತವಾಗಿದ್ದೇವೆ. ಅವರನ್ನು ಗೌರವಿಸಿದರೆ ಭಾರತ ಮಾತೆಯನ್ನು ಗೌರವಿಸಿದಂತೆ ಎಂದರು.
ವೀರ ಯೋಧರಾದ ಬಸವರಾಜ ಸೊರಟೂರ, ಬಸವರಾಜ ಅರಕೇರಿ, ವೀರನಗೌಡ ಮರ್ಕಳ್ಳಿ, ಬಿ.ಎಸ್. ಮಲ್ಲೂರ, ಸುರೇಶ ಪ್ಯಾಟಿ, ಚಂದ್ರಪ್ಪ ಆನ್ವೇರಿ, ಮಹೇಶಪ್ಪ ಹೂಲಿಕೇರಿ, ಬಸವಣ್ಣೆಪ್ಪ ಅಂಗಡಿ, ಬಿ.ಎಚ್. ಕೋಣ್ತಿ, ಎಚ್ ಆಂಜನೇಯ, ಕುಮಾರ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ಪಪಂ ಸದಸ್ಯರಾದ ಕಂಠಾಧರ ಅಂಗಡಿ, ಮಹೇಂದ್ರ ಬಡಳ್ಳಿ, ರಮೇಶ ಕೋಡಿಹಳ್ಳಿ, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾವ್ ಎನ್.ಟಿ., ಸಿ.ಇ.ಎಸ್ ವಿದ್ಯಾಸಂಸ್ಥೆಯ ಸಮಸ್ತ ಬೋಧಕ ಸಿಬ್ಬಂದಿ ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಆರ್.ಎಂ. ಕರೇಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.