

ಬೆಂಗಳೂರು: ವಾಹನ ದುರಸ್ತಿ ಸೇವಾನುಭವ ಪತ್ರ ಕಡ್ಡಾಯಗೊಳಿಸದೆ ಅರ್ಹತೆ (ಮೆರಿಟ್) ಹಾಗೂ ಮೀಸಲಾತಿ ಆಧಾರದಲ್ಲಿ ಆರ್ಟಿಒ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಗುರುವಾರ (ಮಾ.19) ಮಹತ್ವದ ತೀರ್ಪು ನೀಡಿದೆ. ಹೀಗಾಗಿ ಸದ್ಯ ಕೆಪಿಎಸ್ಸಿ ಪ್ರಕಟಿಸಿರುವ 129 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಹೊಸದಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕಿದೆ.
ಕೆಪಿಎಸ್ಸಿ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಶ್ನಿಸಿ ಬೆಂಗಳೂರಿನ ಗೋಕುಲದಾಸ್ ಹಾಗೂ ಬಾಗಲಕೋಟೆಯ ವೀರನಗೌಡ ಪಾಟೀಲ್ ಸಲ್ಲಿಸಿದ್ದ ಅರ್ಜಿಗಳನ್ನು ಕೆಎಟಿ ಮಾನ್ಯ ಮಾಡಿದೆ. ಅಲ್ಲದೆ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಸಂಬಂಧ 2019ರ ಮಾ.8ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಸೇವಾನುಭವ ಪತ್ರ ಕೇಳದೆ ಮೀಸಲಾತಿ ಹಾಗೂ ಅರ್ಹತೆ ಆಧಾರದಲ್ಲಿ ಆಯ್ಕೆ ಮಾಡುವಂತೆ ಕೆಪಿಎಸ್ಸಿಗೆ ಆದೇಶಿಸಿದೆ.
2016ರ ಫೆಬ್ರವರಿಯಲ್ಲಿ 150 ಹುದ್ದೆಗಳ ನೇಮಕಾತಿಗೆ ಆಗಿನ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. 2017ರಲ್ಲಿ ಕೆಪಿಎಸ್ಸಿ ನಡೆಸಿದ ಪರೀಕ್ಷೆಗೆ 2,047 ಅಭ್ಯರ್ಥಿಗಳು ಹಾಜರಾಗಿದ್ದರು. 2019ರ ಜುಲೈನಲ್ಲಿ 129 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಸೇವಾನುಭವ ಪತ್ರ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಮೆರಿಟ್ ಅಭ್ಯರ್ಥಿಗಳನ್ನು ಆಯ್ಕೆಯಿಂದ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಆಯ್ಕೆ ವಂಚಿತ ಅಭ್ಯರ್ಥಿಗಳು ಕೆಎಟಿ ಮೆಟ್ಟಿಲೇರಿದ್ದರು.
ನಿಯಮವೇ ಇಲ್ಲ: ಅಭ್ಯರ್ಥಿಗಳು ಪೆಟ್ರೋಲ್ನಲ್ಲಿ ಸಂಚರಿಸುವ ಬಸ್ ಮತ್ತು ಲಾರಿ (ಹೆವಿ ಗೂಡ್ಸ್ ವೆಹಿಕಲ್) ದುರಸ್ತಿ ತರಬೇತಿ ಪಡೆದಿರುವ 1 ವರ್ಷದ ಸೇವಾನುಭವ ಪತ್ರ ಸಲ್ಲಿಸಬೇಕು ಎಂಬ ನಿಯಮವಿತ್ತು. ಆದರೆ, ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 213 ಉಪ ಕಲಂ 4ಕ್ಕೆ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ಸೇವಾನುಭ ಪತ್ರ ಸಲ್ಲಿಸುವ ನಿಯಮವನ್ನು ರದ್ದುಪಡಿಸಿ 2019ರ ಮಾ.8ರಂದು ಹೊಸದಾಗಿ ಅಧಿಸೂಚನೆ ಹೊರಡಿಸಿದೆ. ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಸಲು ಕೆಎಟಿ ಸೂಚನೆ ಕೊಟ್ಟಿದೆ.
ರೆಪ್ಯೂಟೆಡ್ ವರ್ಕ್ಶಾಪ್ಗಳೇ ಇಲ್ಲ: ಅಭ್ಯರ್ಥಿಗಳು ವಾಹನ ದುರಸ್ತಿ ಸೇವಾನುಭವ ಪತ್ರ ಪಡೆಯಲು ರಾಜ್ಯದಲ್ಲಿ ಸಾರಿಗೆ ಇಲಾಖೆ ಗುರುತಿಸಿರುವ ವರ್ಕ್ಶಾಪ್ಗಳ ಪಟ್ಟಿ ಕೊಡುವಂತೆ ಕೆಎಟಿ ಕೇಳಿತ್ತು. ಆದರೆ, ರೆಪ್ಯುಟೆಡ್ ವರ್ಕ್ಶಾಪ್ಗಳ ಪಟ್ಟಿ ಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು. ಇಲಾಖೆ ಅಧೀನದಲ್ಲಿ ಮಾನ್ಯತೆ ಹೊಂದಿರುವ ಆಟೋಮೊಬೈಲ್ ವರ್ಕ್ಶಾಪ್ಗಳೇ ಇಲ್ಲದ ವಿಚಾರ ವಿಚಾರಣೆ ವೇಳೆ ಕೆಎಟಿ ಗಮನಕ್ಕೆ ಬಂದಿತ್ತು.
ನೌಕರಿ ಡೀಲ್ ಕುರಿತು ವರದಿ ಪ್ರಕಟಿಸಿದ್ದ ವಿಜಯವಾಣಿ
ಪೆಟ್ರೋಲ್ನಲ್ಲಿ ಓಡುವ ಬಸ್ ಹಾಗೂ ಲಾರಿಗಳೇ ಈಗ ಇಲ್ಲ. ಆದಾಗ್ಯೂ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರುವ 129 ಜನರ ಪೈಕಿ 45ಕ್ಕೂ ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆದಿರುವುದಾಗಿ ಸೇವಾನುಭವ ಪತ್ರ ಸಲ್ಲಿಸಿದ್ದಾರೆ. ಹಲವು ಅಭ್ಯರ್ಥಿಗಳು ಒಂದೇ ಸರ್ವೀಸ್ ಸೆಂಟರ್ನ ಸೇವಾನುಭವ ಪತ್ರಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ 24 ಹುದ್ದೆಗಳಿಗೆ ಆರ್ಟಿಒ ಅಧಿಕಾರಿಗಳ ಮಕ್ಕಳು, ಸೊಸೆ, ಪತ್ನಿ, ಸಂಬಂಧಿಕರೇ ಆಯ್ಕೆಯಾಗಿದ್ದರಿಂದ ಅನುಮಾನ ವ್ಯಕ್ತವಾಗಿತ್ತು. 45 ಅಭ್ಯರ್ಥಿಗಳು ಸಲ್ಲಿಸಿರುವ ಪತ್ರಗಳು ನಕಲಿ ಎಂಬುದು ಎಸಿಬಿ ತನಿಖೆಯಲ್ಲಿ ಕೂಡ ದೃಢಪಟ್ಟಿದೆ. ಈ ಬಗ್ಗೆ 2019ರ ಡಿ.22ರಂದು ‘ಆರ್ಟಿಒ ನೌಕರಿ ಡೀಲ್’ ಶೀರ್ಷಿಕೆಯಡಿ ಮುಖಪುಟದಲ್ಲಿ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಗಮನಿಸಿ ಪ್ರತಿಕ್ರಿಯಿಸಿದ್ದ ಕೆಪಿಎಸ್ಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿತ್ತು.
ಕೆಎಟಿ ತೀರ್ಪಿನ ಪ್ರತಿ ಇನ್ನೂ ಸಿಕ್ಕಿಲ್ಲ. ಆದೇಶ ಕೈಸೇರಿದ ನಂತರ ಆಯೋಗದ ಮುಂದಿರಿಸಿ ಮುಂದಿನ ಕ್ರಮಗಳ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಈ ಹಂತದಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. | ಜಿ. ಸತ್ಯವತಿ ಕೆಪಿಎಸ್ಸಿ ಕಾರ್ಯದರ್ಶಿ
| ಕೀರ್ತಿನಾರಾಯಣ ಸಿ.