ಅಪ್ರತಿಮ ದೇಶಭಕ್ತ ಅಟಲ್ ಬಿಹಾರಿ ವಾಜಪೇಯಿ

ATYAL
Published on

ಹೊನ್ನಾಳಿ: ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆಸುವ ಮೂಲಕ ಪ್ರಪಂಚಕ್ಕೆ ತಾನೊಂದು ಪ್ರಬಲ ರಾಷ್ಟ್ರ ಎಂಬ ಸಂದೇಶ ರವಾನಿಸಿದ ಕೀರ್ತಿ ಅಪ್ರತಿಮ ದೇಶಭಕ್ತ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದಲ್ಲಿ ಬುಧವಾರ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಅಟಲ್‌ಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಪರಮಾಣು ಪರೀಕ್ಷೆ ನಂತರ ಹಲವು ರಾಷ್ಟ್ರಗಳು ನಮ್ಮ ದೇಶಕ್ಕೆ ಹಾಕಿದ ಬಹಿಷ್ಕಾರವನ್ನು ಸಮರ್ಥವಾಗಿ ಎದುರಿಸಿದರು. ರಾಷ್ಟ್ರದ ಅಭಿವೃದ್ಧಿಗೆ ಬೇಕಾದ ರಸ್ತೆ ಅಭಿವೃದ್ಧಿಯನ್ನು ಕೈಗೆತ್ತಿಕೊಂಡರು. ಚತುಷ್ಪಥ ಹೆದ್ದಾರಿಗಳ ಮೂಲಕ ದೇಶವನ್ನು ಕೂಡಿಸಿದರು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ವಾಜಪೇಯಿ ಅವರ ನೂರನೇ ವರ್ಷದ ಜನ್ಮದಿನದ ಅಂಗವಾಗಿ ಪ್ರತಿ ಬೂತ್ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಲು ಪಕ್ಷ ಸೂಚನೆ ನೀಡಿದೆ. ರಾಷ್ಟ್ರೀಯ ಅಧ್ಯಕ್ಷರಷ್ಟೇ ಗೌರವವನ್ನು ಬೂತ್ ಕಮಿಟಿ ಅಧ್ಯಕ್ಷರಿಗೂ ಗೌರವ ನೀಡುವ ಪಕ್ಷ ನಮ್ಮದು ಎಂದರು.

ಬಿಜೆಪಿ ಮುಖಂಡರಾದ ಮಂಜುನಾಥ್, ಎಂ.ಎಸ್.ಪಾಲಾಕ್ಷಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀಧರ್, ಮಾಜಿ ಉಪಾಧ್ಯಕ್ಷ ಸರಳಿಮನೆ ಮಂಜಪ್ಪ, ಮಂಜುನಾಥ್ ಇಂಚರ, ಮಹೇಶ್ ಹುಡೇದ್, ರಾಜು ಇತರರಿದ್ದರು.

ವಾಜಪೇಯಿ ದೇಶದ ಶಕ್ತಿ: ಭಾರತದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಾಗಿದ್ದಾಗ ಪ್ರಬಲ ಸಿದ್ಧಾಂತಗಳ ಮೂಲಕ ಹೊಸ ಆಡಳಿತದ ಅಲೆ ತಂದವರು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಎಂದು ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್ ಹೇಳಿದರು.ಬುಧವಾರ ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು.

ವಾಜಪೇಯಿ ಅವರು ತಮ್ಮ ದೂರದೃಷ್ಟಿಯಿಂದ ಭಾರತವನ್ನು ವಿಶ್ವವೇ ತಿರುಗಿ ನೋಡುವಂತೆ ರೂಪಿಸಿದ ಮುತ್ಸದ್ದಿ ರಾಜಕಾರಣಿ ಎಂದು ಹೇಳಿದರು.

ಜಿಲ್ಲಾ ಮುಖಂಡ ಶಾಂತರಾಜ್ ಪಾಟೀಲ್ ಬಲಮುರಿ ಮಾತನಾಡಿ, ಎ.ಬಿ.ವಾಜಪೇಯಿ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ದೇಶದ ಶಕ್ತಿಯಾಗಿದ್ದರು ಎಂದು ಹೇಳಿದರು.

ಬಿಜೆಪಿ ಮುಖಂಡ ಯಕ್ಕನಹಳ್ಳಿ ಜಗದೀಶ್ ಸೇರಿದಂತೆ ಹಲವಾರು ಜನ ಮುಖಂಡರು ಮಾತನಾಡಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ವಿ.ಚಿನ್ನಪ್ಪ, ನೆಲಹೊನ್ನೆ ದೇವರಾಜ್, ಅವಿನಾಶ್. ಬಿಂಬ ಮಂಜುನಾಥ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net