

ಗಜೇಂದ್ರಗಡ: ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಘಟನೆ ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಂಜೆ ಶಿಕ್ಷಕಿ ಆರ್.ವಿ. ಬದಾಮಿ 2ನೇ ತರಗತಿ ಓದುತ್ತಿರುವ ವಿಜಯ ಪರಸಪ್ಪ ಕನ್ಯಾಳ ಎಂಬ ವಿದ್ಯಾರ್ಥಿ ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ವಿದ್ಯಾರ್ಥಿ ಈ ವಿಷಯ ಮನೆಯಲ್ಲಿ ತಿಳಿಸಿ ಇಡೀ ರಾತ್ರಿ ನೋವಿನಿಂದ ನರಳಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಪಾಲಕರು ಬುಧವಾರ ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಸಿಆರ್‌ಪಿ ಶ್ರೀಧರ ಯಂಕಂಚಿ ಪಾಲಕರ ಮನವೊಲಿಸಿ, ಶಾಲೆಗೆ ಹಾಕಿದ್ದ ಬೀಗ ತೆಗೆಸಿ, ಮಗುವಿಗೆ ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ತರಗತಿ ಮಧ್ಯದಲ್ಲಿ ಶೌಚಕ್ಕೆ ಹೋಗಿ ತಡವಾಗಿ ತರಗತಿಗೆ ಮರಳಿದ್ದಾನೆ ಎಂದು ಆರೋಪಿಸಿ ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಮಗ ಮನೆಯಲ್ಲಿ ರಾತ್ರಿ ನರಳುತ್ತಿದ್ದಾಗ ವಿಚಾರಿಸಿದಾಗ ಶಿಕ್ಷಕಿ ಹೊಡೆದಿರುವುದು ಗಮನಕ್ಕೆ ಬಂದಿದೆ. ಶಾಲೆಯಲ್ಲಿ ಮಕ್ಕಳಿಗೆ ಈ ರೀತಿ ಹೊಡೆಯುವಾಗ ಮಕ್ಕಳಿಗೆ ಏನಾದರೂ ಆದರೆ ಹೊಣೆ ಯಾರು?. ಶಿಕ್ಷಕಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಾಲಕನ ತಂದೆ ಪರಶುರಾಮ ಕನ್ಯಾಳ ಆಗ್ರಹಿಸಿದ್ದಾರೆ.
ಶಿಕ್ಷಕಿಯನ್ನು ಮನೆಗೆ ಕಳುಹಿಸಿ, ತರಗತಿಗೆ ತೊಂದರೆಯಾಗದಂತೆ ಬೇರೆ ಶಾಲೆಯ ಶಿಕ್ಷಕರನ್ನು ನಿಯೋಜಿಸಲಾಗಿದೆ. ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕಳುಹಿಸಲಾಗಿದೆ. ಪಾಲಕರು, ಸ್ಥಳೀಯರ ಜತೆ ಚರ್ಚಿಸಿ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಹಿಸುತ್ತೇನೆ ಎಂದು ಸಿಆರ್‌ಪಿ ಶ್ರೀಧರ ಯಂಕಂಚಿ ಹೇಳಿದರು.
ಕಾಲಕಾಲೇಶ್ವರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಆರ್.ವಿ. ಬದಾಮಿ ಅವರು ವಿದ್ಯಾರ್ಥಿಗೆ ಹೊಡೆದಿರುವುದು ಗಮನಕ್ಕೆ ಬಂದ ತಕ್ಷಣ ಸಿಆರ್‌ಪಿ ಅವರನ್ನು ಸ್ಥಳಕ್ಕೆ ಕಳುಹಿಸಿ, ವರದಿಗೆ ಸೂಚಿಸಿದ್ದೇನೆ. ಶಿಕ್ಷಕಿಗೆ ನೋಟಿಸ್ ನೀಡಲಾಗಿದೆ. ಶಿಕ್ಷಕಿಯಿಂದ ಬರುವ ಉತ್ತರ ಹಾಗೂ ಸಿಅರ್‌ಪಿ ಅವರ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.-ರುದ್ರಪ್ಪ ಹುರುಳಿ, ಬಿಇಒ