ನಾಡಬಾಂಬ್ ಸ್ಪೋಟಗೊಂಡು ಕುರಿಗಾಯಿಗೆ ಗಂಭೀರ ಗಾಯ

Crime Logo
Published on

ಮುಂಡಗೋಡ: ಪ್ರಾಣಿಗಳ ಬೇಟೆಗಾಗಿ ದುರುಳರು ಇಟ್ಟಿದ್ದ ನಾಡಬಾಂಬ್ ಅನ್ನು ಕುರಿಗಾಯಿಯೊಬ್ಬ ಹಿಚುಕಿದ ಪರಿಣಾಮ ಅದು ಸ್ಪೋಟಗೊಂಡು ಗಂಭೀರ ಗಾಯಗೊಂಡ ಘಟನೆ ಬಾಚಣಕಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಇಲ್ಲಿಯ ಮಜ್ಜಗೇರಿಯ ಭರಮಪ್ಪ ಭೋವಿ ಗಾಯಗೊಂಡ ಕುರಿಗಾಯಿ.

ಪ್ರತಿದಿನದಂತೆ ಬಾಚಣಕಿ ಕೆರೆಯ ಹತ್ತಿರ ಕುರಿಗಳನ್ನು ಮೇಯಿಸಲು ಹೋಗಿದ್ದ. ಸಂಜೆ ವೇಳೆ ಕೆರೆಯ ಪಕ್ಕ ಬಹಿರ್ದೆಸೆಗೆ ತೆರಳಿದ್ದ ಆತನಿಗೆ ಹೊಳೆಯುತ್ತಿರುವ ವಸ್ತುವೊಂದು ಗೋಚರವಾಗಿದೆ. ಬಾಂಬ್ ಎಂದು ಅರಿಯದ ಆತ ಕೌತುಕದಿಂದ ಆ ವಸ್ತುವನ್ನು ಹಿಚುಕಿದ್ದಾನೆ. ಅಷ್ಟರಲ್ಲಿ ಆ ವಸ್ತು ಸ್ಪೋಟಗೊಂಡು ಎರಡು ಕೈ, ಬೆರಳುಗಳು ಕತ್ತರಿಸಿದ್ದು, ಕಾಲಿಗೆ ಗಾಯವಾಗಿದೆ. ಸ್ಥಳೀಯರು ತಕ್ಷಣವೇ ಈತನನ್ನು ಮುಂಡಗೋಡ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಪ್ರಾಣಿಗಳು ನೀರು ಕುಡಿಯಲು ಅವಲಂಬಿಸಿರುವ ಕೆರೆಯ ಪಕ್ಕದಲ್ಲೇ ಹೀಗೆ ನಾಡಬಾಂಬ್ ಇಟ್ಟಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಓಡಾಡುವ ಜಾಗದಲ್ಲಿ ಇಂತಹ ಸ್ಪೋಟಕ ವಸ್ತುಗಳನ್ನು ಇಟ್ಟಿರುವುದು ಅಮಾಯಕರು ಬಲಿಪಶುಗಳಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಚಣಕಿ, ವಡಗಟ್ಟಾ ಭಾಗ ಸೇರಿ ತಾಲೂಕಿನ ಹಲವು ಕಡೆ ಕಾಡು ಪ್ರಾಣಿಗಳ ಬೇಟೆ ನಿರಂತರವಾಗಿದೆ. ಕೆಲ ಅರಣ್ಯ ಸಿಬ್ಬಂದಿ ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಸಾಥ್ ನೀಡುತ್ತಿದ್ದು, ಗೊತ್ತಿದ್ದರೂ ಮೌನ ವಹಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿವೆ. ಅರಣ್ಯ ಇಲಾಖೆ ಮುಖ್ಯಸ್ಥರು ಇತ್ತ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕಾಡು ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net