

ಹುಬ್ಬಳ್ಳಿ: ನಗರದ ಇಂದಿರಾ ಗ್ಲಾಸ್ ಹೌಸ್ ಪಕ್ಕದ ಗಿರಣಿಚಾಳ ಬಾವಿಯಲ್ಲಿ ಯುವಕನ ಶವ ಸೋಮವಾರ ಬೆಳಗ್ಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಗಿರಣಿಚಾಳ ನಿವಾಸಿ ಉಲ್ಲೇಶ ಹಾಲಹರವಿ (37) ಮೃತ ಯುವಕ ಎಂದು ಗುರುತಿಸಲಾಗಿದೆ. ಸ್ಥಳೀಯರು ಬಾವಿಯಲ್ಲಿದ್ದ ಶವದ ಬಗ್ಗೆ ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಪಿಐ ಎಂ.ಎಸ್. ಹೂಗಾರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಯುವಕನ ಕುತ್ತಿಗೆಯನ್ನು ಮಾರಕಾಸ್ತ್ರದಿಂದ ಕೊಯ್ದಂತಿರುವ ಗುರುತು ಪತ್ತೆಯಾಗಿದ್ದು, ಯುವಕನ ಕುಟುಂಬದವರು ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.