

ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆ ಎಂಟಿಎಸ್ ಕಾಲನಿಯ ಪಾಳುಬಿದ್ದ ಜಾಗದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ಶವ ಬುಧವಾರ ಪತ್ತೆಯಾಗಿದೆ.
ಹೆಗ್ಗೇರಿ ಮಾರುತಿ ನಗರದ ವಿಜಯ ಸುರೇಶ ಬಸವಾ (26) ಮೃತ ಯುವಕ. ವೋಡಾ-ಐಡಿಯಾ (ವಿಐ) ಕಂಪನಿಯಲ್ಲಿ ಟೀಂ ಲೀಡರ್ ಆಗಿಕೆಲಸ ಮಾಡುತ್ತಿದ್ದ ವಿಜಯ, ಮಂಗಳವಾರ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದಿದ್ದ. ನಂತರ ಹೊರಗೆ ಹೋಗಿದ್ದ. ತಡರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಬುಧವಾರ ಬೆಳಗ್ಗೆ ಆತನ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಾರೋ ಆತನನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿರಬಹುದೆಂದು ಸಹೋದರ ವಿಶಾಲ ಬಸವಾ ತಿಳಿಸಿದರು.
ಪ್ರಾಥಮಿಕ ತನಿಖೆಯಿಂದ ಇದು ಕೊಲೆಯೋ? ಆತ್ಮಹತ್ಯೆಯೋ ಎಂಬುದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಮತ್ತು ತನಿಖೆ ನಂತರವೇ ನಿಜಾಂಶ ಬಯಲಿಗೆ ಬರಲಿದೆ ಎಂದು ಎಸಿಪಿ ವಿಜಯಕುಮಾರ ತಳವಾರ ತಿಳಿಸಿದರು. ಘಟನಾ ಸ್ಥಳಕ್ಕೆ ಡಿಸಿಪಿ ರಾಜೀವ ಎಂ., ರವೀಶ ಸಿ.ಆರ್. ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.