

ಭಟ್ಕಳ: ತೋಟದಲ್ಲಿ ಕೆಲಸ ಮುಗಿಸಿ ಕೆಜ್ಜಿಲು ಬಾಳೆ ಹೊಳೆಯಲ್ಲಿ ಕೈ ಕಾಲು ಮುಖ ತೊಳೆಯಲು ಹೋದ ಕೃಷಿಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾಗಿದ್ದು, ಗುರುವಾರ ಬೆಳಗ್ಗೆ ಮೃತ ದೇಹ ಪತ್ತೆಯಾಗಿದೆ.
ಮಾರುಕೇರಿ ಪಂಚಾಯಿತಿ ವ್ಯಾಪ್ತಿಯ ನಿವಾಸಿ ರಾಮಯ್ಯ ಕೃಷ್ಣ ಗೊಂಡ (52) ಮೃತ ಕೃಷಿಕ. ಈತ ಮಂಗಳವಾರ ತನ್ನ ತೋಟದ ಕೆಲಸಕ್ಕೆ ಹೋಗಿ ಸಂಜೆ ವೇಳೆ ಕೆಲಸ ಮುಗಿಸಿ ಕೆಜ್ಜಿಲು ಬಾಳೆ ಹೊಳೆಯಲ್ಲಿ ಕೈ ಕಾಲು ಮುಖ ತೊಳೆಯಲು ಹೋದಾಗ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾಗಿದ್ದರು. ಬಳಿಕ ಮೃತ ದೇಹದ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸಿದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಆದರೆ, ಗುರುವಾರ ಬೆಳಗ್ಗೆ ಅದೇ ಹೊಳೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ನಂತರ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತನ ಸಹೋದರ ಮಾಸ್ತಿ ಗೊಂಡ ದೂರು ನೀಡಿದ್ದಾರೆ. ಗ್ರಾಮೀಣ ಠಾಣೆಯ ಎಎಸ್ಐ ಕೃಷ್ಣನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.