ಅಂಧವಿಶೇಷ ಚೇತನರು ಸಬಲರಾಗಬೇಕು; ಎಚ್.ಟಿ.ಅನಿಲ್

MDK02
Published on

ಮಡಿಕೇರಿ: ಅಂಧ ವಿಶೇಷ ಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರವು ಅತ್ಯಂತ ಪ್ರಯೋಜನಕಾರಿ, ಪರಿಣಾಮಕಾರಿಯಾದ ಕಾರ್ಯಯೋಜನೆಯಾಗಿದ್ದು, ಅಂಧ ವಿಶೇಷ ಚೇತನರಿಗೆ ಆರ್ಥಿಕತೆಯೊಂದಿಗೆ ಸಾಮಾಜಿಕವಾಗಿಯೂ ಶಿಬಿರ ಉಪಯುಕ್ತವಾಗಿದೆ ಎಂದು ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಅಭಿಪ್ರಾಯಪಟ್ಟರು.


ನಗರದ ರೆಡ್ ಕ್ರಾಸ್ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ, ಭಾರತೀಯ ರೆಡ್ ಕ್ರಾಸ್ ಕೊಡಗು ಘಟಕ, ರೋಟರಿ ಮಿಸ್ಟಿ ಹಿಲಸ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆದ ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ, ಚಲನವಲನ ಕಲಿಕೆಯ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಜಿಲ್ಲೆಯಲ್ಲಿ ಸುಮಾರು ೬೨೦ ರಷ್ಟು ಅಂಧ ವಿಶೇಷಚೇತನರಿದ್ದು ಮುಂದಿನ ದಿನಗಳಲ್ಲಿ ಇಂಥವರಿಗೂ ಬೃಹತ್ ಮಟ್ಟದಲ್ಲಿ ಕಲಿಕಾ ಶಿಬಿರ ಆಯೋಜಿಸಿ ಶಿಕ್ಷಣ, ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು, ದಾನಿಗಳು ಸಹಾಯ ನೀಡುವಂತಾಗಬೇಕು. ತರಕಾರಿ ಕೆತ್ತನೆ, ಕ್ಷೌರ, ಹಣ್ಣುಗಳನ್ನು ಗುರುತಿಸುವಿಕೆ ಮತ್ತಿತರ ಕೆಲಸಗಳನ್ನು ಕಲಿಯುವ ಮೂಲಕ ಶಿಬಿರದಲ್ಲಿನ ೧೬ ಅಂಧ ವಿಶೇಷ ಚೇತನರು ಸ್ವಾವಲಂಭಿಗಳಾಗುವುದಷ್ಟೇ ಅಲ್ಲ. ಸ್ವಾಭಿಮಾನಿಗಳಾಗಿ ಜೀವಿಸಲು ಶಕ್ತರಾಗಿದ್ದಾರೆ ಎಂದು ಹೇಳಿದರು.


ವಿಶೇಷಚೇತನರಿಗೆ ವಿಶೇಷವಾದ ಬುದ್ಧಿಶಕ್ತಿಯಿರುತ್ತದೆ. ಇದನ್ನು ೪ ದಿನಗಳ ಶಿಬಿರದಲ್ಲಿಯೇ ಅಂಧವಿಶೇಷಚೇತನರು ವೇಗದ ಕಲಿಕೆಯ ಮೂಲಕ ಸಾಬೀತುಪಡಿಸಿದ್ದಾರೆ. ದೃಷ್ಟಿ ಕಾಣಿಸುವುದಿಲ್ಲ ಎಂದು ಮನೆಯಲ್ಲಿ ಮೂಲೆಗುಂಪಾಗುವ ಚಿಂತೆಯ ದಿನಗಳು ಹೋಗಿ ಮುಂದಿನ ದಿನಗಳಲ್ಲಿ ಮನೆಯ ಕೆಲಸ ಕಾರ್ಯಗಳಲ್ಲಿಯೂ ಅಂಧ ವಿಶೇಷ ಚೇತನರು ನೆರವಾಗುತ್ತಾರೆ. ಅಂಥ ಛಲವಂತಿಕೆಯನ್ನು ಈ ಶಿಬಿರ ಕಲಿಸಿದೆ ಎಂದು ಅಭಿಪ್ರಾಯಪಟ್ಟರು.


ರೆಡ್ ಕ್ರಾಸ್ ಜಿಲ್ಲಾಸಭಾಪತಿ ಬಿ.ಕೆ.ರವೀಂದ್ರ ರೈ ಶಿಬಿರಾರ್ಥಿಗಳಿಗೆ ಬಿಳಿಬೆತ್ತ ವಿತರಿಸಿ ಮಾತನಾಡಿ, ರೆಡ್ ಕ್ರಾಸ್ ವತಿಯಿಂದ ಅಂಧ ವಿಶೇಷಚೇತನರಿಗೆ ಕಂಪ್ಯೂಟರ್ ತರಬೇತಿ ನೀಡುವ ಕಾರ್ಯಾಗಾರ ಹಮ್ಮಿಕೊಳ್ಳಲಿದೆ. ಶಿಬಿರವು ಅಂಧ ವಿಶೇಷ ಚೇತನರಲ್ಲಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿ, ಪರಿಪೂರ್ಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಶಿಬಿರಾರ್ಥಿ ಕಡಗದಾಳುವಿನ ಶಂಭು ಮತ್ತು ಮಡಿಕೇರಿಯ ಪುಪ್ಪಾವತಿ ಮಾತನಾಡಿ, ದೃಷ್ಟಿ ದೋಷದಿಂದ ಕತ್ತಲಿನಲ್ಲಿರುವ ತಮಗೆ ಶಿಬಿರದ ಮೂಲಕ ಹೊಸರೀತಿಯ ಜೀವನ ಕ್ರಮ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕರ್ನಾಟಕ ಬೆಳೆಗಾರರ ಒಕ್ಕೂಟದ ವಕ್ತಾರ ಕೆ.ಕೆ.ವಿಶ್ವನಾಥ್, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಪಿ.ರಮೇಶ್, ರೋಟರಿ ಮಿಸ್ಟಿ ಹಿಲ್ಸ್ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ರೆಡ್ ಕ್ರಾಸ್ ನಿರ್ದೇಶಕ ಉತ್ತಯ್ಯ, ಶಿಬಿರದ ವ್ಯವಸ್ಥಾಪಕ ಅಂಕಾಚಾರಿ ಇತರರು ಹಾಜರಿದ್ದರು.


ನಾಲ್ಕು ದಿನಗಳ ಶಿಬಿರದಲ್ಲಿ ೪ ಮಹಿಳೆಯರು, ೧೨ ಪುರುಷ ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ, ಚಲನವಲನ, ತರಕಾರಿ ಕೆತ್ತನೆ, ಹಣ್ಣು, ಕಾಳುಗಳನ್ನು ಗುರುತಿಸುವಿಕೆ, ಏರುತಗ್ಗಿನ ರಸ್ತೆಯಲ್ಲಿ ಬಿಳಿಬೆತ್ತದೊಂದಿಗೆ ಜಾಗ್ರತೆಯಿಂದ ನಡೆಯುವಿಕೆ ಮತ್ತಿತರ ಮುಖ್ಯ ಕ್ರಮಗಳನ್ನು ಸಮಗ್ರವಾಗಿ ಕಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net