

ಬ್ಯಾಟರಾಯನಪುರ: ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಟಿಕೆಟ್ ವಂಚಿತ ಆಕಾಂಕ್ಷಿಗಳು ಕಾಲೆಳೆಯವ ಸಾಂಕ್ರಾಮಿಕತೆ ಕಾಂಗ್ರಸ್ ಪಕ್ಷದಲ್ಲಿದೆ, ಆದರೆ ಈ ಸಾಂಕ್ರಾಮಿಕತೆ ಇತ್ತೀಚೆಗೆ ಬಿಜೆಪಿಗೂ ಹರಡಿದ್ದು, ಇದು ತೊಲಗಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರ ಬಿಜೆಪಿ ವತಿಯಿಂದ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ನೇತೃತ್ವದಲ್ಲಿ ‘ಸಂಕಲ್ಪ’ ಶೀರ್ಷಿಕೆಯಡಿ ಶನಿವಾರ ಆಯೋಜಿಸಿದ್ದ ಬಿಜೆಪಿ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು
‘ಬಿಜೆಪಿ ಶಿಸ್ತು, ಮೌಲ್ಯಗಳಿಗೆ ಹೆಸರಾದ ಪಕ್ಷ. ರಾಷ್ಟ್ರೀಯತೆ, ದೇಶಾಭಿಮಾನ ನಮ್ಮ ಧ್ಯೇಯವಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಬಿಜೆಪಿಗರೇ ಸೋಲಿಸುವ ಕುತಂತ್ರದ, ಅಸಹನೀಯ ಬೆಳವಣಿಗೆಗಳನ್ನು ತಡೆಯಲು ಅಗತ್ಯ ಕ್ರಮ ವಹಿಸಬೇಕು; ಇಲ್ಲದಿದ್ದರೆ ಪಕ್ಷಕ್ಕೆ ಬಹುದೊಡ್ಡ ನಷ್ಟ ಉಂಟಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ‘ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯತೆಯಿಂದಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಿಂದ ವಲಸೆ ಹೋಗಲು ಸಿದ್ಧವಾಗಿವೆ. ಕಂದಾಯ ಇಲಾಖೆಯ ಇ-ಖಾತ, ಬಿ-ಖಾತ, ಎ-ಖಾತ ಎಲ್ಲಾ ಮೇಳಗಳು ಭಷ್ಟಾಚಾರದ ಮೂಲಗಳಾಗಿವೆ. ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಸರ್ಕಾರದಿಂದ ಜನತೆ ಏನನ್ನೂ ನಿರೀಕ್ಷಿಸಲಾಗದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಮುಖಂಡರುಗಳಾದ ಹನುಮಂತಗೌಡ, ಕೃಷ್ಣಮೂರ್ತಿ, ಪಿ.ಕೆ.ರಾಜಗೋಪಾಲ್, ಬಿಬಿಎಂಪಿ ಮಾಜಿ ಸದಸ್ಯೆ ಕುಸುಮ ಮಂಜುನಾಥ್, ಬೇಗೂರು ಮಹೇಶ್, ಬಿ.ಎಸ್.ಅನಿಲ್ ಕುಮಾರ್, ಮುನಿಹನುಮಯ್ಯ ಸೇರಿದಂತೆ ಇನ್ನಿತರರಿದ್ದರು.
‘ವೋಟ್ ಚೋರಿ ತಡೆ ಕುರಿತು ರಾಹುಲ್ ಗಾಂಧಿಯವರು ಅಸಮಂಜಸವಾಗಿ ಮಾತನಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ವೋಟ್ ಚೋರಿಯಿಂದಲೇ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತಿದೆ. ಬ್ಯಾಟರಾಯನಪುರ ಕ್ಷೇತ್ರದ 14 ವಾರ್ಡ್‌ಗಳಲ್ಲೂ ಬಿಜೆಪಿ ಸದೃಢವಾಗಿದ್ದು, ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಎಲ್ಲಾ 14 ವಾರ್ಡ್‌ಗಳಲ್ಲೂ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ. -ಎಚ್.ಸಿ.ತಮ್ಮೇಶ್ ಗೌಡ , ಬಿಜೆಪಿ ರಾಜ್ಯ ಕಾರ್ಯದರ್ಶಿ