ಮಾವಿನ ಕಂಪು ಸುವಾಸನೆ ಶುರು

FotoJet
Published on

ಸಿ.ಎಸ್​.ವಿಶ್ವನಾಥ ಶಾಸ್ತ್ರಿ ರಾಯಲ್ಪಾಡು

ವಿಭಜಿತ ಕೋಲಾರ ಜಿಲ್ಲೆಯಲ್ಲಿ ಮಾವಿನ ಕಂಪು ಸುವಾಸನೆ ಶುರುವಾಗುತ್ತಿದೆ. ಮರದ ತುಂಬ ಮಮಿಸುವ ಹೂವಿನ ಪರಿಮಳ ತುಂಬಿಕೊಂಡಿದ್ದು, ಮಾವಿನ ಮರಗಳ ಸೌಂದರ್ಯ ಹೆಚ್ಚಿಸಿದೆ. ಮಾವು ಬೆಳೆಗಾರರಲ್ಲಿ ಸಂತಸ ದುಪ್ಪಟ್ಟಾಗಿದ್ದು, ಅಧಿಕ ಇಳುವರಿಯ ನಿರೀಕ್ಷೆ ಹೆಚ್ಚಿಸಿದೆ.

ಶ್ರೀನಿವಾಸಪುರವು ಮಾವಿನ ಮಡಿಲು ಎಂದೇ ಖ್ಯಾತಿ ಗಳಿಸಿದೆ. ಇಲ್ಲಿ ಬೆಳೆಯುವ ಮಾವು ದೇಶ&ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಜತೆಗೆ ಬಾದಾಮಿ, ಇಜಗೀರಾ, ಬೇನಿಫಿ, ನೀಲಂ, ತೋತಾಪುರಿ, ಸೇಂದೂರಾ/ರಸಪೂರಿ ಸೇರಿ ಹಲವು ತಳಿಯ ಮಾವಿನ ಹಣ್ಣುಗಳು ದೇಶದಾಚೆಗೆ ಅಧಿಕ ಪ್ರಮಾಣದಲ್ಲಿ ರಫ್ತಾಗುತ್ತಿವೆ. ಈ ಭಾಗದ ಜನರ ಜೀವನಾಡಿಯಾಗಿರುವ ಮಾವು ರೈತರ ಬದುಕು ಹಸನಾಗಿಸಿದ್ದಂತೂ ಸುಳ್ಳಲ್ಲ.

ಹೂವಿನ ಕಲರವ: ಕೆಲವೊಂದು ಮರಗಳಲ್ಲಿ ಎಲೆಗಳೇ ಕಾಣದ ರೀತಿ ಹೂವು ಬಿಟ್ಟಿದ್ದು, ಮಾವು ಬೆಳೆಗಾರರ ನಿರೀಕ್ಷೆ ಹೆಚ್ಚಾಗಿದೆ. ಕಳೆದ ವರ್ಷ ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ಬಿದ್ದ ಅರೆಕಾಲಿಕ ಮಳೆಯಿಂದ ಭೂಮಿ ತಂಪಾಗಿ ಮಾವಿನ ಮರಗಳು ಫಲವತ್ತತೆ ಕಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಮಾವಿನ ಮರಗಳು ಸೊಂಪಾಗಿ ಮೈತುಂಬ ಹೂವು ಮುಡಿದು ನಿಂತಿವೆ. ವರ್ಷಕ್ಕೆ ಒಂದೇ ಬೆಳೆಯಾದರೂ ರೈತಾಪಿ ಕುಟುಂಬಗಳಿಗೆ ಬದುಕು ಕಟ್ಟಿಕೊಡುವ ಮಾವು ಇಲ್ಲಿನ ರೈತರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಿದೆ.

ಪ್ರಾಥಮಿಕ ಸಂರಕ್ಷಣೆ ಅಗತ್ಯ

ಹೂವು ಬಿಡುವ ಅವಧಿಯಲ್ಲಿ ಜಿಗಿಹುಳ, ದ್ರಿಪ್ಸ್​, ಮೈಟ್ಸ್​, ಹೂವುತೆನೆ ಕ್ಯಾಟರ್​ ಪಿಲ್ಲರ್​, ಹೂವುತೆನೆ ಕಪ್ಪಾಗುವ ರೋಗ, ಎಲೆ ಚಿಬ್ಬು ರೋಗ, ಬೂದಿ ರೋಗ, ಕಾಡಿಗೆ ರೋಗ ಸೇರಿ ಅನೇಕ ರೋಗಗಳು ಕಾಡುತ್ತವೆ. ಈ 1&2 ಹಂತದಲ್ಲಿ ಸಮಯಕ್ಕೆ ಸರಿಯಾಗಿ ಹೂವುತೆನೆ, ಹೂವುಗಳಿಗೆ ಕೀಟ ಹಾಗೂ ರೋಗ ತಡೆಗಟ್ಟಲು ಔಷಧ ಸಿಂಪಡಣೆ ಮೂಲಕ ಮಾವಿನ ಹೂವು ಸಂರಕ್ಷಣೆ ಮಾಡಬೇಕು. ಮುಖ್ಯವಾಗಿ ಥೈಯೋಮೆಥೋಕ್ಸಾಮ್​ ಅಥವಾ ್ಲೋನಿಕಾಮಿಡ್​ ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್​ ಅಥವಾ ಟಾಲ್​ಫೆನ್​ಪೈರಾಡ್​ ಅನ್ನು ಮೊದಲ ಹಂತದಲ್ಲಿ ಸಿಂಪಡಣೆ ಮಾಡಬಹುದು. ಡೆಲ್ಟಾಮೆಥ್ರಿನ್​ ಹೆಕ್ಷಕೊನಜೋಲ್​, ಬೂಪ್ರೊಪೆಜಿನ್​ ಮ್ಯಾಂಕೋಜಬ್​, ಡಯಾಫೆಂತಿಯುರಾನ್​ ಡೈಫೆಂಕೊನಜಾಲ್​, ಅಜಾದಿರ್ಯಾಕ್ಟಿನ್​ ಡೈಫೆಂಕೊನಜಾಲ್​, ಇಂಡಾಕ್ಷಕಾರ್ಬನ್​ ಟೆಬೂಕೋನಜಾಲ್​ ಅಥವಾ ್ಲೋನಿಕಾಮಿಡ್​ ಟ್ರೆೃಫ್ಲಾಕ್ಷಿಸ್ಟ್ರೋಬಿನ್​ ಔಷಧಗಳನ್ನು 2ನೇ ಹಂತದಲ್ಲಿ ಸಿಂಪಡಣೆ ಮಾಡುವುದರಿಂದ ಹೂವು ತೆನೆ ಒಣಗುವ ರೋಗ, ಬೂದಿ ರೋಗ ಮತ್ತು ರಸ ಹೀರುವ ಕೀಟಗಳು ನಿಯಂತ್ರಿಸಲ್ಪಡುತ್ತದೆ. ಅಂತೆಯೇ ಔಷಧ ಸಿಂಪಡಣೆಗೂ ಮುನ್ನ ಹಾಗೂ ಹೆಚ್ಚಿನ ವಿವರಗಳಿಗೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

"ಸಾಮಾನ್ಯವಾಗಿ ಹೂವು ಬಿಡುವ ಹಂತದಲ್ಲಿ ಯಾವುದೇ ಕೀಟನಾಶಕ ಉಪಯೋಗಿಸಬಾರದು. ಕಾರಣ ಪರಾಗಸ್ಪರ್ಶ ಮಾಡುವ ಕೀಟಗಳಾದ ಜೇನು ಸೇರಿ ಹಲವು ಉಪಯುಕ್ತ ಕೀಟಗಳು ನಾಶವಾಗುವ ಅಪಾಯವಿರುತ್ತದೆ. ಪರಿಸ್ಥಿತಿಯ ಅನಿವಾರ್ಯತೆ ಗಮನಿಸಿ ಇಲಾಖಾಧಿಕಾರಿಗಳ ಸಲಹೆಯ ಮೇರೆಗೆ ಔಷಧ ಸಿಂಪಡಣೆ ಮಾಡಬೇಕು."

- ಬೈರೆಡ್ಡಿ

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಶ್ರೀನಿವಾಸಪುರ

ಮಾರ್ಚ್​ನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮಳೆಯ ಅವಶ್ಯ ಇದೆ. ಮಾರ್ಚ್​ನಲ್ಲಿ ಮಳೆ ಬಂದರೆ ಮಾವಿನಕಾಯಿ ಸಲು ಚೆನ್ನಾಗಿ ಬರುತ್ತದೆ. ಇಲ್ಲವಾದರೆ ಮಾವು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ.

- ನೀಲಟೂರು ಚಿನ್ನಪ್ಪರೆಡ್ಡಿ

ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net