ಜೈನರ ಗುತ್ತಿಯಲ್ಲಿ ಜನ್ಮ ಕಲ್ಯಾಣಕ ಅದ್ದೂರಿ ಆರಂಭ

ಜೈನರ ಗುತ್ತಿಯಲ್ಲಿ ನಡೆದ ಪಂಚಕಲ್ಯಾಣಕ ಮಹೋತ್ಸವದಲ್ಲಿ ತೀಥರ್ಂಕರರ ಮಸ್ತಕಾಭಿಷೇಕಕ್ಕೆ ಕಳಸ ತರಲು  ಸೌಧಮೇರ್ಂದ್ರ ಪರಿವಾರ ರಥದಲ್ಲಿ ತೆರಳುತ್ತಿರುವುದು.
ಜೈನರ ಗುತ್ತಿಯಲ್ಲಿ ನಡೆದ ಪಂಚಕಲ್ಯಾಣಕ ಮಹೋತ್ಸವದಲ್ಲಿ ತೀಥರ್ಂಕರರ ಮಸ್ತಕಾಭಿಷೇಕಕ್ಕೆ ಕಳಸ ತರಲು ಸೌಧಮೇರ್ಂದ್ರ ಪರಿವಾರ ರಥದಲ್ಲಿ ತೆರಳುತ್ತಿರುವುದು.
Published on

ಬೇಲೂರು/ಹಗರೆ: ತಾಲೂಕಿನ ಹಳೇಬೀಡು ಸಮೀಪದ ಜೈನರ ಗುತ್ತಿಯಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣಕ ಮಹೋತ್ಸವದ ಮೂರನೇ ದಿನವಾದ ಭಾನುವಾರ ಮುಂಜಾನೆ ಜನ್ಮ ಕಲ್ಯಾಣಕ ಅದ್ದೂರಿಯಾಗಿ ಆರಂಭವಾಯಿತು.

ಮೈ ನಡುಗಿಸುವ ಚಳಿಯನ್ನು ಲೆಕ್ಕಿಸದೆ ಜೈನ ಮುನಿಗಳು, ಪ್ರತಿಷ್ಠಾಚಾರ್ಯರು ಹಾಗೂ ಪುರೋಹಿತರು ನಸುಕಿನಲ್ಲಿಯೇ ಪೂಜಾ ವಿಧಾನ ಆರಂಭಿಸಿದರು. ರಾಶಿ ಗುಡ್ಡದ ತಪ್ಪಲಿನಲ್ಲಿ ಸುಪ್ರಭಾತದೊಂದಿಗೆ ಮಂಗಳವಾದ್ಯ ಮೊಳಗಿತು. ಪಂಚ ಕಲ್ಯಾಣಕ ಮಂಟಪ ಹಾಗೂ ಜಿನ ಮಂದಿರದಲ್ಲಿ ಜಿನೇಂದ್ರ ಅಭಿಷೇಕ ನೆರವೇರಿಸಲಾಯಿತು. ಯಾಗ ಮಂಡಲ ಆರಾಧನೆಯೊಂದಿಗೆ ಅರ್ಘ್ಯಗಳನ್ನು ಸಮರ್ಪಿಸಿ, ಗರ್ಭ ಕಲ್ಯಾಣಕ ಪೂಜೆ ನೆರವೇರಿಸಲಾಯಿತು. ಪಾಂಡುಕ ಶಿಲೆ ಮೇಲೆ ನಡೆದ ಜನ್ಮಾಭಿಷೇಕ ಹಾಗೂ ಜನ್ಮ ಕಲ್ಯಾಣಕ ಪೂಜೆಯನ್ನು ನೆರೆದಿದ್ದ ಶ್ರಾವಕರು ಭಕ್ತಿಭಾವದಿಂದ ಕಣ್ತುಂಬಿಕೊಂಡರು. ಸಂಗೀತಮಯ ಆರತಿ ತೀರ್ಥಂಕರ ನಾಮಕರಣ ನಡೆಸಲಾಯಿತು. ತೀಥರ್ಂಕರ ಬಾಲ್ಯದ ಆಟಗಳನ್ನು ವರ್ಣಮಯವಾಗಿ ಮಕ್ಕಳಿಂದ ಪ್ರಸ್ತುತ ಪಡಿಸಲಾಯಿತು.

ಆಚಾರ್ಯ ವಿಶುದ್ಧ ಸಾಗರ ಮುನಿ ಮುಹಾ ಮಹಾರಾಜರು, ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜರು ಹಾಗೂ ವೀರ ಸಾಗರ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ಪಂಚ ಕಲ್ಯಾಣಕ ವಿಧಾನಗಳು ನೆರವೇರಿಸಲಾಯಿತು.

ಜೈನರ ಗುತ್ತಿ ಪಂಚ ಕಲ್ಯಾಣಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ ಮಾತನಾಡಿ, ಮೂರ್ತಿ ಪ್ರತಿಷ್ಠಾಪನೆ ಪರಿಪೂರ್ಣವಾಗಲು ಪಂಚಕಲ್ಯಾಣಕ ಅತಿಮುಖ್ಯ. ಜಿನ ಮಂದಿರ ಹಾಗೂ ಮೂರ್ತಿ ಪ್ರತಿಷ್ಠಾಪನೆ ಪರಿಪೂರ್ಣವಾಗಲು ಪಂಚ ಕಲ್ಯಾಣಕ ಮಹೋತ್ಸವ ಅತಿ ಮುಖ್ಯ. ಜತೆಗೆ ಜೈನರ ಪವಿತ್ರ ಆಚರಣೆಗಳಲ್ಲಿ ಪಂಚ ಕಲ್ಯಾಣಕ ಪ್ರಮುಖ ವಿಧಾನ ಎಂದರು.

ಜೈನರ ಗುತ್ತಿಯಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣಕ ಮಹೊತ್ಸವದಲ್ಲಿ 21 ದಿಗಂಬರ ಜೈನ ಮುನಿಗಳು ಸಾನ್ನಿಧ್ಯ ವಹಿಸಿರುವುದು ನಮ್ಮೆಲ್ಲರ ಸುದೈವ. ಮುನಿಗಳ ಸಮ್ಮುಖದಲ್ಲಿ ನಡೆಯುವ ಪಂಚ ಕಲ್ಯಾಣಕ ಕಣ್ತುಂಬಿಕೊಳ್ಳಲು ಅವಕಾಶ ದೊರಕಿರುವುದು ನಮ್ಮೆಲ್ಲರ ಪುಣ್ಯ. ದೊಡ್ಡ ಮಟ್ಟದ ಪಂಚ ಕಲ್ಯಾಣಕ ಮಹೋತ್ಸವ ನಡೆಸಲು ಒಂದು ವರ್ಷದಿಂದ ಸಿದ್ಧತೆ ಕೈಗೊಳ್ಳಲಾಗಿತ್ತು. ಹಣ ಹೊಂದಿಸುವುದು ಹಾಗೂ ಸಿದ್ಧತೆ ಕಷ್ಟವಾಗುತ್ತದೆ ಎಂದು ಭಯದಲ್ಲಿದ್ದೆವು. ಆದರೆ ವೀರಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಪಂಚ ಕಲ್ಯಾಣಕ ಯಶಸ್ವಿಯಾಗಿ ಸಾಗುತ್ತಿದೆ ಎಂದು ಹೇಳಿದರು.

ಜೈನರಗುತ್ತಿ ಪಂಚ ಕಲ್ಯಾಣಕ ಮಹೊತ್ಸವ ಸಮಿತಿ ಕಾರ್ಯದರ್ಶಿ ನೇಮಿರಾಜ ಅರಿಗ, ಪಾಣಿ ಮಂಗಳೂರು ಧರಣೇಂದ್ರ, ಪ್ರಮೋದ್, ಜಯೇಂದ್ರ ಕುಮಾರ್, ನಾಗೇಂದ್ರ ಪ್ರಸಾದ್, ಧವನ್, ಪದ್ಮಿನಿ ಪದ್ಮರಾಜ್, ರೇಖಾ ಧವನ್, ವಾಣಿ ರತ್ನಾಕರ, ಶೀಲಾ ನಾಗರಾಜ್ ಭಾಗವಹಿಸಿದ್ದರು.

ಸ್ಕೌಟ್ ಮತ್ತು ಗೈಡ್ಸ್ ಸೇವೆ: ಹಳೇಬೀಡಿನ ಎಸ್.ಜಿ.ಆರ್ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ಪಂಚಕಲ್ಯಾಣಕ ಮಹೋತ್ಸವದಲ್ಲಿ ಸ್ವಚ್ಛತೆ ನಡೆಸಿದರು. ಜೈನರಗುತ್ತಿ ಜಿನ ಮಂದಿರದ ವಿಶಾಲವಾದ ಆವರಣದಲ್ಲಿ ಸಣ್ಣದಾದ ಕಸ ಕಡ್ಡಿಯೂ ಇಲ್ಲದಂತೆ ಮಕ್ಕಳು ಸ್ವಚ್ಛತೆ ನಡೆಸಿದರು. ಊಟ, ಉಪಾಹಾರದ ಪೆಂಡಾಲಿನಲ್ಲಿ ಎಲ್ಲೆಂದರಲ್ಲಿ ಊಟ ಮಾಡಿದ ತಟ್ಟೆ ಹಾಕದಂತೆ ನೋಡಿ ಕೊಂಡರರು. ಕೈಲಾಗದವರು, ವಯೋವೃದ್ಧರ ಸೇವೆಯನ್ನು ಮಕ್ಕಳು ನಿರ್ವಹಿಸಿದರು. ಭಕ್ತರು ಊಟವನ್ನು ಎಲ್ಲೆಂದರಲ್ಲಿ ಚೆಲ್ಲದಂತೆ ಆಹಾರ ಸಮಿತಿ ಎಚ್ಚರ ವಹಿಸಿತ್ತು.

ಸ್ವಚ್ಛತಾ ಸಮಿತಿ ಸಂಚಾಲಕಿ ಯಶೋದಾ ಜೈನ್, ಎಸ್‌ಜಿಆರ್ ಶಾಲೆ ಮುಖ್ಯಶಿಕ್ಷಕಿ ಬಿ.ಎಲ್.ಮಮತಾ ಮಕ್ಕಳ ಜತೆ ಕೆಲಸ ನಿರ್ವಹಿಸಿದ್ದು ಗಮನಾರ್ಹವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net