

ಜಯಪುರ: ಜಯಪುರ-ಶೃಂಗೇರಿ ರಾಜ್ಯ ಹೆದ್ದಾರಿ 27ರ ಜಲದುರ್ಗಾ ಬಳಿ ಪಿಡಬ್ಲುೃಡಿ ನಡೆಸಿದ ಕಳಪೆ ಕಾಮಗಾರಿಯಿಂದಾಗಿ ಶನಿವಾರ ಬೈಕ್ ಸವಾರನೊಬ್ಬ ಬಿದ್ದು ಗಾಯಗೊಂಡಿದ್ದಾನೆ. ಇದರಿಂದ ಕಳಪೆ ಕಾಮಗಾರಿ ಬಯಲಾಗಿದೆ.
ಚಿಕ್ಕಮಗಳೂರು-ಜಯಪುರ-ಶೃಂಗೇರಿ-ಮಂಗಳೂರು ಸಂರ್ಕಿಸುವ ರಾಜ್ಯ ಹೆದ್ದಾರಿಯ ಜಲದುರ್ಗದಲ್ಲಿ ಫೆಬ್ರವರಿಯಲ್ಲಿ ಮೋರಿ ದುರಸ್ತಿ ಮಾಡಲಾಗಿತ್ತು. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿದ ಪರಿಣಾಮ ರಸ್ತೆ ಮಧ್ಯ ಹೊಂಡ ಬಿದ್ದಿದ್ದು, ಹೊಂಡಕ್ಕಿಳಿದ ಬೈಕ್ ಬಿದ್ದು ಸವಾರ ಕೃಷ್ಣ ಎಂಬಾತ ಗಾಯಗೊಂಡಿದ್ದಾರೆ.
ಮೋರಿ ದುರಸ್ತಿ ಆರಂಭದಲ್ಲಿ ಇಲ್ಲಿ ಕೆಲಸ ನಡೆಯುತ್ತಿದೆ ಎಂಬ ಸೂಚನಾ ಲಕ ಅಳವಡಿಸದೆ ಅನೇಕ ಅಪಘಾತಗಳಿಗೆ ಕಾರಣವಾಗಿತ್ತು. ಈ ಕುರಿತು ‘ಸೂಚನಾ ಲಕ ಅಳವಡಿಸದ ಗುತ್ತಿಗೆದಾರ-ಜಲದುರ್ಗಾದಲ್ಲಿ ಅಪಘಾತ ನಿಶ್ಚಿತ’ ಎಂದು ವಿಜಯವಾಣಿ ವರದಿ ಮಾಡಿ ಪೊಲೀಸರು ಹಾಗೂ ಪಿಡಬ್ಲುೃಡಿ ಅಧಿಕಾರಿಗಳನ್ನು ಎಚ್ಚರಿಸಿದ ನಂತರ ಬ್ಯಾರಿಕೇಡ್ ಅಳವಡಿಸಿದ್ದರು. ಈಗ ಗುಂಡಿ ಬಿದ್ದಿದೆ.
ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸರಿಯಾದ ಕಾಮಗಾರಿ ನಡೆಸದೆ ಪಿಡಬ್ಲುೃಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ವಾಹನ ಸವಾರರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ದುರಸ್ತಿ ವೇಳೆ ಹಾಕಿರುವ ಮಣ್ಣು ಸೆಟ್ಟಾಗಲಿ ಎನ್ನುವ ಕಾರಣಕ್ಕೆ ಡಾಂಬರು ಹಾಕಿರಲಿಲ್ಲ. ಕೂಡಲೆ ಗುಂಡಿ ಮುಚ್ಚಿಸಲು ಗುತ್ತಿಗೆದಾರರಿಗೆ ಸೂಚಿಸುತ್ತೇನೆ. ಮೋರಿ ದುರಸ್ತಿ ಜಾಗಕ್ಕೆ ನಾಲ್ಕು ದಿನದ ಒಳಗೆ ಡಾಂಬರು ಹಾಕಿಸುತ್ತೇವೆ ಎಂದು ಪಿಡಬ್ಲುೃಡಿ ಎಇಇ ಕುಮಾರ್ ಹೇಳಿದ್ದಾರೆ.