ಆರ್ಥಿಕ ದಿವಾಳಿತನ ಅತಿದೊಡ್ಡ ಅಪಾಯ

Kageri p
Published on

ಶಿರಸಿ: ರಾಜ್ಯದಲ್ಲಿ ಅಪರಾಧಿಗಳಿಗೆ ಸುರಕ್ಷಿತ ವಾತಾವರಣ ನಿರ್ವಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ಕೂಡಿ ಗೃಹ ಸಚಿವ ಜಿ. ಪರಮೇಶ್ವರ ಅವರ ಹೆಸರಿಗೆ ಕಳಂಕ ತರುವ ಸಲುವಾಗಿಯೇ ಈ ಪರಿಸ್ಥಿತಿ ನಿರ್ವಿುಸಿದ್ದಾರೆ ಎಂದು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಸ್​ಡಿಪಿಐ ಸಂಘಟನೆ ಮೇಲಿನ ವಿವಿಧ ಕೇಸ್ ವಾಪಸ್ ಪಡೆದಿದೆ. ಪೊಲೀಸ್ ಠಾಣೆ ಸುಟ್ಟವರ ಕೇಸ್ ವಾಪಸ್ ತೆಗೆದುಕೊಂಡಿದೆ. ಈ ರೀತಿಯ ಸರ್ಕಾರದ ಧೋರಣೆಯಿಂದ ಅಪರಾಧಿಕರಣ ಮನೋಭಾವ ಹೆಚ್ಚಾಗಿದೆ. ನೇಹಾ ಹಿರೇಮಠ, ಅಂಜಲಿ ಅವರ ಕೊಲೆ ಸಹ ಇದೇ ಧೋರಣೆಯ ಕಾರಣದಿಂದಾಗಿದೆ. ಶಿರಸಿಯಲ್ಲೂ ಇಂತಹದ್ದೇ ವಾತಾವರಣ ಸೃಷ್ಟಿಯಾಗಿದೆ. ಸೈನಿಕನ ಮನೆ ಮೇಲೆ ದಾಳಿ ನಡೆದಿದೆ, ಸೈನಿಕನಿಂದ ತಪ್ಪಾಗಿದ್ದರೆ ಕಾನೂನು ಹೋರಾಟ ಆಗಬೇಕಿತ್ತೇ ಹೊರತೂ ಮನೆ ಮೇಲೆ ದಾಳಿ ಸಲ್ಲ. ಉದ್ಯಮಿ ಪ್ರೀತಮ ಪಾಲನಕರ್ ಆತ್ಮಹತ್ಯೆಗೆ ಕಾರಣರಾದ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಈ ಸರ್ಕಾರದ ಆಡಳಿತದಲ್ಲಿ ಜೀವಕ್ಕೇ ಗ್ಯಾರಂಟಿ ಇಲ್ಲ, ಇನ್ನು ಸರ್ಕಾರದ ಗ್ಯಾರಂಟಿ ತಗೊಂಡು ಏನು ಮಾಡೋಣ ಎಂದು ಜನ ಕೇಳುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಒಂದು ವರ್ಷ ಆಡಳಿತ ಪೂರ್ಣಗೊಳಿಸಿದೆ. ರಾಜ್ಯದಲ್ಲಿ ಹೇಳಿಕೊಳ್ಳುವ ಯಾವ ಕಾರ್ಯವೂ ಆಗಿಲ್ಲ. ಗುತ್ತಿಗೆದಾರರಿಗೆ ಮಾಡಿದ ಕಾಮಗಾರಿಯ ಬಿಲ್ ಬರುತ್ತಿಲ್ಲ. ಹಾಲು ಉತ್ಪಾದಕರ ಸಬ್ಸಿಡಿ ಹಣ ಬಿಡುಗಡೆ ಆಗುತ್ತಿಲ್ಲ. ಜತೆಗೆ ಆರ್ಥಿಕ ದಿವಾಳಿತನ ಅತಿದೊಡ್ಡ ಅಪಾಯ ತಂದೊಡ್ಡಲಿದೆ ಎಂದರು.

ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾದ ಬಳಿಕ ಶೈಕ್ಷಣಿಕ ವ್ಯವಸ್ಥೆಯೇ ಕುಸಿದಿದೆ. ಅವರನ್ನು ಕಿತ್ತೆಸೆದು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಒತ್ತಾಯಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾಗೇರಿ, ಪ್ರಧಾನಿ ನರೇಂದ್ರ ಮೋದಿಯವರು ಶಿರಸಿಗೆ ಬಂದಾಗ ಅನಂತಕುಮಾರ ಹೆಗಡೆ ಬರಬೇಕಿತ್ತು ಎಂಬುದು ಎಲ್ಲರ ಆಶಯ ಆಗಿತ್ತು. ಆದರೆ, ಅವರು ಬಂದಿಲ್ಲ. ಅದೇ ರೀತಿ ಶಾಸಕ ಶಿವರಾಮ ಹೆಬ್ಬಾರ ಸಹ ಬಿಜೆಪಿಯ ಸಂಘಟನೆಯಲ್ಲಿ ಪಾಲ್ಗೊಂಡಿಲ್ಲ. ಅವರಿಗೆ ಪಕ್ಷದಲ್ಲಿ ಹೊಂದಿಕೆ ಆಗದಿದ್ದರೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸಲಿ. ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ ಎಂದರು.

ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷೆ ಉಷಾ ಹೆಗಡೆ, ನಗರ ಘಟಕ ಅಧ್ಯಕ್ಷ ಆನಂದ ಸಾಲೇರ, ಆರ್.ವಿ. ಹೆಗಡೆ ಚಿಪಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net