ಆರೋಗ್ಯ ಪೂರ್ಣ ಜೀವನ ನಡೆಸುವುದೇ ದೊಡ್ಡ ಸವಾಲು

27 mlv 2
Published on

ಮಳವಳ್ಳಿ : ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಿದೆ ಎಂದು ತಪಾಸಣೆಗಾಗಿ ಆಸ್ಪತ್ರೆಗಳಿಗೆ ತೆರಳಿದರೆ ಹತ್ತಾರು ಪರೀಕ್ಷೆಗೆ ಒಳಪಡಿಸಿ ಸಾವಿರಾರು ರೂ. ಹಣ ವ್ಯಯಿಸಿಕೊಂಡು ಆರೋಗ್ಯ ಸುಧಾರಣೆ ಕಂಡರೂ ಆರ್ಥಿಕವಾದ ಅನಾರೋಗ್ಯಕ್ಕೆ ಸಿಲುಕಿಕೊಳ್ಳುವಂತಾಗಿದೆ ಜನರ ಪ್ರಸ್ತುತ ಪರಿಸ್ಥಿತಿ ಎಂದು ಬಿ.ಜಿ.ಪುರ ಹೊರಮಠದ ಪೀಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಬಿ.ಜಿ.ಪುರ ಹೊರಮಠದಲ್ಲಿ ಶರಣ ಸಂಘಟನಾ ವೇದಿಕೆ ಹೋಬಳಿ ಘಟಕದ ವತಿಯಿಂದ ನಗ ಫೌಂಡೇಷನ್ ಮತ್ತು ಇತರ ಜನಪರ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಮನುಕುಲಕ್ಕೆ ಆರೋಗ್ಯ ಪೂರ್ಣ ಜೀವನ ನಡೆಸುವುದೇ ದೊಡ್ಡ ಸವಾಲಾಗಿದೆ. ಇದಕ್ಕೆ ನಾವು ಸೇವಿಸುವ ಆಹಾರ ಧಾನ್ಯ ಪದಾರ್ಥಗಳ ವಿಷಪೂರಿತವಾಗಿರುವುದೇ ಮೂಲ ಕಾರಣವಾಗಿದೆ. ಲಾಭದ ಆಸೆಗಾಗಿ ಭೂಮಿತಾಯಿಗೆ ವಿಷ ಉಳಿಸಿ ಇಳುವರಿ ಸಿಗುವ ಬೆಳೆ ಪಡೆದು ಭ್ರಮೆಯಲ್ಲಿ ಬದುಕು ಸಾಗುತ್ತಿದೆ. ಮುಂದಿನ ದಿನದಗಳಲ್ಲಾದರೂ ಕೃಷಿಗೆ ಕ್ರಿಮಿನಾಶಕ ಬಳಸುವುದನ್ನು ತ್ಯಜಿಸಿ ಮಣ್ಣಿನ ಸತ್ವವನ್ನು ಕಾಪಾಡಿಕೊಳ್ಳಬೇಕು. ಸಾವಯವ ಕೃಷಿಯತ್ತ ಬದಲಾಗುವ ಮೂಲಕ ಮನುಕುಲಕ್ಕೆ ಆಹಾರ ಕೊಡುವಂತಹ ಅನ್ನದಾತರಾಗಬೇಕೆಂದು ಸಂದೇಶ ನೀಡಿದರು.

ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ನೂರಾರು ಜನರಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವೈದ್ಯರ ತಂಡ ನೇತ್ರಾ ತಪಸಾಣೆ, ದಂತ ಚಿಕಿತ್ಸೆ, ದೇಹದ ತಪಾಸಣೆಗಳನ್ನು ಮಾಡಿದರು.

ಶರಣ ಸಂಘಟನಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಂದೀಶ್, ಬಿ.ಜಿ.ಪುರ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಪಿಡಿಒ ಜಯಸ್ವಾಮಿ, ವೈದ್ಯರಾದ ಡಾ.ಅರುಣ್ ಕುಮಾರ್, ಡಾ.ಎಚ್.ಸುನೀಲ್, ಡಾ.ಶಿವಕುಮಾರ್, ಡಾ.ಉಮೇಶ್ ಮಠಪತಿ, ಡಾ.ಸಂಜನಾ, ಡಾ.ಹರಿಪ್ರಸಾದ್, ಮುಖಂಡರಾದ ಎಚ್.ಸಿ.ಮಹೇಶ್, ಗಜೇಂದ್ರ, ರಮೇಶ್, ಮಹದೇವಸ್ವಾಮಿ, ಸುರೇಶ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net