ದೊಡ್ಡ ಸಾಹೇಬ್ರ ಹೇಳಿದ್ರ ಪಾವತಿಸುವೆ

The big Sahebra is to pay
ಇಳಕಲ್ಲ ನಗರದ ಕಂಠಿ ಸರ್ಕಲ್ ಹತ್ತಿರ ಇರುವ ನಗರಸಭೆ ವಾಣಿಜ್ಯ ಮಳಿಗೆಗಳಿಗೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಬಾಡಿಗೆ ಬಾಕಿ ಹಣ ತುಂಬುವಂತೆ ವ್ಯಾಪಾರಸ್ಥರಿಗೆ ಸೂಚಿಸಿದರು. ನಗರಸಭೆ ಅಧಿಕಾರಿ ಪರಶುರಾಮ ನಾರಾಯಣಿ, ಸುರೇಶ ಮಾಮನಿ, ಎಸ್. ಚೆನ್ನಬಸನಗೌಡ್ರ ಇದ್ದರು.
Published on

ಇಳಕಲ್ಲ: ಬಾಗಲಕೋಟೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಸೂಚನೆ ಹಿನ್ನೆಲೆಯಲ್ಲಿ ಗುರುವಾರ ರಸ್ತೆಗೆ ಇಳಿದಿರುವ ಇಳಕಲ್ಲ ನಗರಸಭೆ ಸಿಬ್ಬಂದಿ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿಗೆ ಮುಂದಾದರು.

ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿ ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣವನ್ನು ಪಾವತಿಸುವಂತೆ ಸಜ್ಜನ ಶಾಲೆ ಮುಂಭಾಗದಲ್ಲಿರುವ ನೂತನ ಸೂಪರ್ ಮಾರ್ಕೆಟ್ ಮಳಿಗೆಗಳ ವ್ಯಾಪಾರಸ್ಥರಿಗೆ ಸೂಚಿಸಿದರು.

ನಗರದ ಕಂಠಿ ಸರ್ಕಲ್ ಬಳಿಯ ಮಳಿಗೆಗಳಲ್ಲಿರುವ ಮೊಬೈಲ್ ಅಂಗಡಿ ವ್ಯಾಪಾರಸ್ಥನ ಬಳಿ ಬಾಡಿಗೆ ವಸೂಲಿಗೆ ತೆರಳಿದಾಗ, ಬಾಡಿಗೆ ಬಾಕಿ ಮೇಲೆ ವಿಧಿಸಿರುವ ಬಡ್ಡಿ ಬಿಟ್ಟು ಉಳಿದ ಹಣವನ್ನು ಪಾವತಿಸುತ್ತೇನೆ. ದೊಡ್ಡ ಸಾಹೇಬ್ರರಾದ ಎಂಎಲ್ಎ ಅವರಿಗೆ ಹೇಳಿದ್ದೇನೆ. ಅವರು ಹೇಳಿದರೆ ಮಾತ್ರ ಕಟ್ಟುವುದಾಗಿ ವ್ಯಾಪಾರಸ್ಥ ತಿಳಿಸಿದನು. ಅಧಿಕಾರಿಗಳು ಎಲ್ಲವನ್ನೂ ತುಂಬಲೇಬೇಕು ಎಂದು ಪ್ರತಿಕ್ರಿಯಿಸಿದರು. ಆಗ ಆತ ಅಧಿಕಾರಿಗಳ ಜತೆ ಕೆಲ ಹೊತ್ತು ಮಾತಿನ ಚಕಮಕಿ ನಡೆಸಿದನು.

ನಗರಸಭೆ ಮಳಿಗೆಗಳಲ್ಲಿರುವ ವ್ಯಾಪಾರಸ್ಥರು ಎರಡು ದಿನಗಳ ಒಳಗಾಗಿ ಬಾಕಿ ಉಳಿಸಿಕೊಂಡಿರುವ ಕರವನ್ನು ಪಾವತಿಸದಿದ್ದರೆ ಮಳಿಗೆಗಳನ್ನು ಸೀಜ್ ಮಾಡುವುದಾಗಿ ನಗರಸಭೆ ಅಧಿಕಾರಿ ಪರಶುರಾಮ ನಾರಾಯಣಿ ತಾಕೀತು ಮಾಡಿದರು.

ಬಾಡಿಗೆ ಹಣ ವಸೂಲಿ ಮಾಡದಿದ್ದರೆ ನಮ್ಮ ನೌಕರಿ ಹೋಗುತ್ತದೆ. ನಾವು ಏನ್ ಮಾಡಬೇಕು ಎಂದು ವ್ಯಾಪಾರಸ್ಥರ ವಿರುದ್ಧ ರೇಗಿದರೂ ಯಾರೂ ಬಾಕಿ ಹಣ ಪಾವತಿಸಲು ಮುಂದಾಗಲಿಲ್ಲ.

ನಗರಸಭೆ ಸಿಬ್ಬಂದಿ ಸುರೇಶ ಮಾಮನಿ, ಎಸ್. ಚೆನ್ನಬಸನಗೌಡ್ರ, ಬಡೇಸಾಬ್ ಹುಲಿಕೇರಿ, ಮಹಾಂತೇಶ ಹುಚ್ಚಿಗಿಡದ, ಪ್ರಭು ಮುದ್ದೇಬಿಹಾಳ, ವಿನಾಯಕ ಮುದಗಲ್, ಸಂಗಮೇಶ ಮನ್ನಿಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net