

ಮಳವಳ್ಳಿ: ಯುವ ಪೀಳಿಗೆಯು ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳಲು ಸಮರಕಲೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರ ಮಟ್ಟದ ಮುಖ್ಯ ತರಬೇತುದಾರ ಎಚ್.ಮಾಲತೇಶ್ ಹೇಳಿದರು.
ತಾಲೂಕಿನ ಪಂಡಿತಹಳ್ಳಿ ಸೇಂಟ್ ಜೋಸೆಫ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮರಕಲೆ ಕ್ರೀಡೆಯಷ್ಟೇ ಮುಖ್ಯವಾದದ್ದು. ಶಾಲಾ ದಿನಗಳಲ್ಲಿ ಶೈಕ್ಷಣಿಕ ಕಲಿಕೆಯ ಜತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಮತ್ತು ಭವಿಷ್ಯದ ಸುರಕ್ಷತೆ ಜೀವನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಇಲ್ಲಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಟಾಟೆ ತರಬೇತಿ ನೀಡುವ ಮೂಲಕ ಉತ್ತಮ ಸಮಾಜದ ಪ್ರಜೆಗಳನ್ನು ನೀಡುವ ಹೊಣೆಗಾರಿಕೆ ನಿರ್ವಹಿಸುತ್ತಿರುವುದು ಪ್ರಶಂಸನೀಯವಾಗಿದೆ. ರಾಷ್ಟ್ರ ಮಟ್ಟದ ತರಬೇತುದಾರನಾಗಿ ಆಯ್ಕೆಯಾಗಿರುವುದನ್ನು ಗುರುತಿಸಿ ಆಹ್ವಾನ ನೀಡಿ ಅಭಿನಂದಿಸಿರುವುದು ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಅಲ್ಲದೆ ನಿಮ್ಮೊಡನೆ ನನ್ನ ಅನುಭವನ್ನು ಹಂಚಿಕೊಂಡಿರುವುದಕ್ಕೆ ಸಂತಸವಾಗಿದೆ ಎಂದರು.
ಕಾರ್ಯಕ್ರಮದ ನಂತರ ಮಕ್ಕಳಿಗೆ ಸಮರಕಲೆ ಅಭ್ಯಾಸ ತರಗತಿಗಳನ್ನು ನಡೆಸಿಕೊಟ್ಟರು. ಶಾಲೆಯ ಮುಖ್ಯಸ್ಥ ಫಾದರ್ ಪ್ರದೀಪ್ ಆಂಟೋನಿ, ಪ್ರಾಂಶುಪಾಲ ಫಾದರ್ ಆಲ್ವಿನ್ ಡಿಸೋಜ, ಆಡಳಿತಾಧಿಕಾರಿ ಅನೀಶ್, ಕಾರ್ಯಕ್ರಮ ನಿಯೋಜಕಿ ಮಮತಾ ಇದ್ದರು.