

|ಶಿವು ಹುಣಸೂರು
ಇಡೀ ದೇಶದಲ್ಲಿ ಅತ್ಯುತ್ತಮ ಕಲಿಕಾ ವ್ಯವಸ್ಥೆ ಹೊಂದಿದ್ದು, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಹೆಗ್ಗಳಿಕೆಗೆ ಹುಣಸೂರು ತಾಲೂಕು ಪಾತ್ರವಾಗಿದೆ.
ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್ಐಇ) ಇತ್ತೀಚೆಗೆ ಕೈಗೊಂಡ ಪ್ರಾಥಮಿಕ ಹಂತದ (1ರಿಂದ 8ನೇ ತರಗತಿವರೆಗೆ) ಶಿಕ್ಷಣ ಗುಣಮಟ್ಟದ ಬೇಸ್ಲೈನ್ ಸಮೀಕ್ಷೆಯ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಎನ್ಸಿಎಫ್-2005ರ ಆಶಯಗಳ ಅನುಷ್ಠಾನ: ನವದೆಹಲಿಯ ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ದೇಶದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 (ಎನ್ಸಿಎಫ್-2005)ರ ಆಶಯಗಳು ಶಾಲಾ ಹಂತಗಳಲ್ಲಿ ಈಡೇರಿವೆಯೇ? ಇವು ಶಾಲಾ ಹಂತದಲ್ಲಿ ಸಾಕಾರಗೊಂಡು ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ ಬಲವರ್ಧನೆಯಾಗಿದೆಯೇ? ಇದರ ಅಳವಡಿಕೆಯ ಸ್ಥಿತಿಗತಿಗಳೇನು ಮುಂತಾದ ವಿಷಯಗಳ ಕುರಿತು ಅಧ್ಯಯನ ಕೈಗೊಳ್ಳಲು ತೀರ್ಮಾನಿಸಿತು.
ಅದರಂತೆ, ಎನ್ಸಿಎಫ್ 2005ರ ಆಶಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 2018-19ರಲ್ಲಿ ರಾಷ್ಟ್ರವ್ಯಾಪಿ 5 ಆರ್ಐಇ ಕೇಂದ್ರ (ಎನ್ಸಿಇಆರ್ಟಿಯ ಅಂಗಸಂಸ್ಥೆ)ಗಳ ಮೂಲಕ ಆಯಾ ಭಾಗದ ಒಂದು ತಾಲೂಕನ್ನು ಆಯ್ಕೆ ಮಾಡಿಕೊಂಡು ಶಾಲಾ ವ್ಯವಸ್ಥೆ, ಶಿಕ್ಷಣದ ಗುಣಮಟ್ಟ, ಸ್ಥಿತಿಗತಿಗಳ ಕುರಿತು ಬೇಸ್ಲೈನ್ ಸರ್ವೇ ಕಾರ್ಯ ನಡೆಸಿತು. ಮೈಸೂರು, ಭೂಪಾಲ್, ಅಜ್ಮೀರ್, ಶಿಲ್ಲಾಂಗ್ ಮತ್ತು ಭುವನೇಶ್ವರ್ ಆರ್ಐಇ ಕೇಂದ್ರಗಳು ಈ ಬೇಸ್ಲೈನ್ ಸರ್ವೇ ಕಾರ್ಯ ನಡೆಸಿದ್ದು, ಮೈಸೂರಿನ ಆರ್ಐಇ ಸಂಸ್ಥೆ ಹುಣಸೂರು ತಾಲೂಕನ್ನು ದತ್ತು ಪಡೆದು ಸರ್ವೇ ನಡೆಸಿದೆ. ಹಿರಿಯ ಶಿಕ್ಷಣ ತಜ್ಞ, ಪ್ರಸ್ತುತ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಸಿ.ಜಿ.ವೆಂಕಟೇಶಮೂರ್ತಿ ನೇತೃತ್ವದಲ್ಲಿ ಸರ್ವೇ ನಡೆಸಲಾಗಿದೆ.
ಬೇಸ್ಲೈನ್ ಸರ್ವೇ ಉದ್ದೇಶ: ಎನ್ಸಿಎಫ್ 2005ರ ಆಶಯಗಳ ಅನುಷ್ಠಾನದ ಸ್ಥಿತಿಗತಿಗಳ ಅಧ್ಯಯನ, ಪ್ರಾಥಮಿಕ ಹಂತದ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಈ ಅಧ್ಯಯನದಲ್ಲಿ ಒಳಪಡಿಸಲಾಗುತ್ತದೆ. ಗುಣಾತ್ಮಕ ಶಿಕ್ಷಣದ ಬಲವರ್ಧನೆಗೆ ಕೈಗೊಳ್ಳಬಹುದಾದ ಮಧ್ಯವರ್ತನಾ ಚಟುವಟಿಕೆಗಳ ಆಯೋಜನೆ, ಮಕ್ಕಳ ಕಲಿಕಾ ಮಟ್ಟದ ಬಲವರ್ಧನೆ ಮತ್ತು ಶಿಕ್ಷಕರ ವೃತ್ತಿ ದಕ್ಷತೆಯನ್ನು ಅಭಿವೃದ್ಧಿಗೊಳಿಸುವುದು, ವೃತ್ತಿಪರ ಶಿಕ್ಷಣ ಹಾಗೂ ಸಮನ್ವಯ ಶಿಕ್ಷಣದ ಬಗ್ಗೆ ಒತ್ತು ನೀಡಿ ಶಾಲಾ ಹಂತದಲ್ಲಿ ಇವುಗಳ ಸಮರ್ಪಕ ಅನುಷ್ಠಾನಕ್ಕೆ ಕಾರ್ಯ ಯೋಜನೆ ರೂಪಿಸುವುದು ಹಾಗೂ ಅಧ್ಯಯನಕ್ಕೆ ಪೂರಕವಾಗಿ ವಿವಿಧ ಹಂತಗಳಲ್ಲಿ ಟಾಸ್ಕ್ಫೋರ್ಸ್ ರಚಿಸಿ ಆ ಮೂಲಕ ಅಧ್ಯಯನ ನಡೆಸಿ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು ಬೇಸ್ಲೈನ್ ಸರ್ವೇ ಕಾರ್ಯದ ಮುಖ್ಯ ಉದ್ದೇಶ. ಮೈಸೂರಿನಿಂದ ಈಗಾಗಲೇ 100ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಟಾಸ್ಕ್ಫೋರ್ಸ್ ಸಮಿತಿ ಸದಸ್ಯರಾಗಿ ನೇಮಕಗೊಂಡು ಕಾರ್ಯಾರಂಭ ಮಾಡಿದ್ದಾರೆ.
ಆರ್ಐಇ ಕೈಗೊಂಡ ಬೇಸ್ಲೈನ್ ಸರ್ವೇ ಕಾರ್ಯದ ವೇಳೆ ಹುಣಸೂರು ತಾಲೂಕಿನ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ರಾಷ್ಟ್ರೀಯ ಸಾಧನಾ ಸಮೀಕ್ಷಾ ಪರೀಕ್ಷೆಯಲ್ಲಿ ಹುಣಸೂರಿನ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು, ಸ್ಥಳೀಯವಾಗಿ ಸರ್ಕಾರೇತರ ಸಂಘ-ಸಂಸ್ಥೆಗಳು ಪ್ರಾಥಮಿಕ ಶಾಲೆಗಳಿಗೆ ನೀಡಿರುವ ಉದಾರ ಸೇವಾ ಕಾರ್ಯಗಳು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿವೆ. ಸಮೀಕ್ಷೆಯಲ್ಲಿ ತಾಲೂಕಿನ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಹೆಚ್ಚಿನ ಹಿಡಿತ ಸಾಧಿಸಿರುವುದು, ನಂತರದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಹೆಚ್ಚು ತಿಳಿವಳಿಕೆ ಹೊಂದಿರುವುದು ತಿಳಿದುಬಂದಿದೆ. ಅದೇ ರೀತಿ ಕಲಿಕಾ ವಿಭಾಗದಲ್ಲಿ ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ್ದಾರೆ.
ಮಧ್ಯವರ್ತನಾ ಚಟುವಟಿಕೆಗಳು: ಸರ್ವೇ ಕಾರ್ಯದ ವರದಿಯನ್ವಯ ಶಿಕ್ಷಕರಲ್ಲಿ ವೃತ್ತಿಪರ ಕೌಶಲ ಹೆಚ್ಚಿಸುವ ಉದ್ದೇಶದೊಂದಿಗೆ ಶಾಲಾ ಕಲಿಕಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲು ಶಿಕ್ಷಕರಿಗೆ ಮಧ್ಯವರ್ತನಾ ಕಲಿಕೆ ತರಬೇತಿ ಒದಗಿಸಲಾಗುತ್ತದೆ. ಕಲಾ ಸಮ್ಮಿಳಿತ ಕಲಿಕಾ ತರಬೇತಿ, ಶಾಲಾಧಾರಿತ ಮೌಲ್ಯಾಂಕನ, ಮುಖ್ಯಶಿಕ್ಷಕ ಮತ್ತು ಸಹಶಿಕ್ಷಕರ ವೃತ್ತಿಪರತೆ ಹೆಚ್ಚಿಸುವುದು, ನಾಯಕತ್ವ ಗುಣ ರೂಪಿಸುವುದು, ಸಮುದಾಯದ ಸಹಭಾಗಿತ್ವ, ಗಣಿತ ಮತ್ತು ವಿಜ್ಞಾನದ ಕಿಟ್ಗಳ ಬಳಕೆ ಸೇರಿ ಮುಂತಾದವುಗಳನ್ನು ಮಧ್ಯವರ್ತನಾ ಚಟುವಟಿಕೆಗಳ ತರಬೇತಿ ಹೊಂದಿದೆ.
| ಎಸ್.ಪಿ.ನಾಗರಾಜ್ ಕ್ಷೇತ್ರ ಶಿಕ್ಷಣಾಧಿಕಾರಿ, ಹುಣಸೂರು