

ಭಟ್ಕಳ: ಒಂದೇ ಒಂದು ರಾಮನ ಜಪ ಒಳಿತನ್ನು ಮಾಡಲು ಸಾಧ್ಯವಾಗುತ್ತದೆ. ಅಂದರೆ 550 ದಿವಸ 550ಕೋಟಿ ರಾಮನ ಜಪ ಮಾಡಿದರೆ ಅದರಿಂದ ಎಷ್ಟೊಂದು ಪ್ರಯೋಜನ ಸಿಗಬಹುದು ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಅವರು ಮುಂಬೈನಲ್ಲಿ ಭಕ್ತರಿಗೆ ರಾಮತಾರಕ ಮಹಾಮಂತ್ರದ ಉಪದೇಶ ನೀಡಿದರು. ಶತ್ರು ಪಕ್ಷಕ್ಕೂ ವಿಜಯ ಬೇಕಾದರೆ ಅವರಿಗೂ ಶ್ರೀರಾಮನ ಜಪ ಆಗಬೇಕು. ರಾಮ ಸೇತು ನಿರ್ಮಾಣ ಮಾಡುವಾಗ ರಾಮನ ಪಕ್ಷದ ವಾನರರು ಸಮುದ್ರದಲ್ಲಿ ಹಾಕಿದ ಕಲ್ಲುಗಳು ತೇಲುತಿದ್ದವು. ಅದನ್ನು ನೋಡಿದ ರಾವಣನ ಸೇನೆ ರಾಮನಲ್ಲಿ ಅದ್ಭ್ಬುತವಾದ ಶಕ್ತಿ ಇದೆ. ನಮ್ಮ ರಾಜ ರಾವಣನ ಬಳಿಯಲ್ಲೂ ಇಂತಹ ಶಕ್ತಿ ಇದೆಯೋ ಎನ್ನುವ ಕುರಿತು ಸೇನಾಧಿಪತಿ ಪತಿ ಬಳಿ ಬಂದು ಸಂದೇಹ ವ್ಯಕ್ತಪಡಿಸುತ್ತಾರೆ. ಇದು ರಾವಣನ ಕಿವಿಗೂ ತಲುಪಿ ಸೈನಿಕರು ಎದೆಗುಂದಿದರೆ ಯುದ್ಧ ಗೆಲ್ಲುವುದು ಕಷ್ಟ ಎಂದು ಅವರಿಗೆ ತನ್ನ ಪರಾಕ್ರಮ ತೋರಿಸಲು ಮುಂದಾಗುತ್ತಾನೆ. ಕಲ್ಲುಗಳ ಬಳಿ ತೆರಳಿ ರಾಮನು ಇದ್ದಿದ್ದು ಹೌದಾದರೆ, ನಾನು ಸಮುದ್ರಕ್ಕೆ ಎಸೆದ ಕಲ್ಲುಗಳು ತೆಲಬೇಕು ಎಂದು ರಾಮನ ಆಶ್ವಾಸನೆ ಪಡೆದು ಎಸೆದ ಕಲ್ಲುಗಳು ತೇಲಲು ಆರಂಭಿಸುತ್ತವೆ. ಆಗ ರಾವಣನ ಮೇಲೆ ಅವನ ಸೈನಿಕರಿಗೆ ವಿಶ್ವಾಸ ಬರುತ್ತದೆ. ರಾಮನ ಶತ್ರು ರಾವಣನಿಗೂ ಕೂಡ ರಾಮನ ಜಪ ಮಾತ್ರದಿಂದ ಅನುಗ್ರಹ ಸಿಗುತ್ತದೆ ಎಂದಾದರೆ, ರಾಮ ಭಕ್ತರಾದ ನಮಗೆ ಎಷ್ಟು ಅನುಗ್ರಹ ದೊರಕಬಹುದು ಎಂದು ಯೋಚಿಸಿ ಎಂದು ಶ್ರೀಗಳು ರಾಮ ಜಪದ ಮಹತ್ವ ತಿಳಿಸಿದರು.
ನಮ್ಮ ಸಂಕಲ್ಪ ದೊಡ್ಡದಿದೆ. ವಿಷಯವೂ ದೊಡ್ಡದಿದೆ. ಆದರೆ, ನಮಗೆ ನಮ್ಮ ಭಕ್ತರ ಸಹಯೋಗ ದೊರೆಯಲಿದೆ. ನಮ್ಮ ಅಭಿಯಾನ ಹಾಗೂ ನಮ್ಮ 550 ದಿನಗಳಲ್ಲಿ 550 ಕೋಟಿ ರಾಮತಾರಕ ಮಂತ್ರದ ಸಂಕಲ್ಪ ಪರಿಪೂರ್ಣ ಆಗಲಿದೆ ಎಂದರು. ಮುಂಬೈನ ರಾಮತಾರಕ ಘಟಕದವರು 13 ಕೋಟಿ ಮಂತ್ರ ಪಠಿಸುವುದಾಗಿ ಆಶ್ವಾಸನೆ ನೀಡಿದರೆ, ದಾಂಡೇಲಿಯ ಜಿಎಸ್ಬಿ ಸಮಾಜದವರು 33 ಕೋಟಿ ಮಂತ್ರ ಪಠಿಸುವುದಾಗಿ ತಿಳಿಸಿದರು.