ತುಂಬಿ ಹರಿಯುತ್ತಿದೆ ಬೆನಕನಹಳ್ಳ

111
ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ಎದ್ದಲಹಳ್ಳಿ ಸಮೀಪದಲ್ಲಿರುವ ಬೆನಕನಹಳ್ಳದ ದೃಶ್ಯ.
Published on

ತೂಬಗೆರೆ : ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಆಶ್ಲೇಷ ಮಳೆಯಿಂದ ಯದ್ದಲಹಳ್ಳಿ ಸಮೀಪದ ಪುರಾತನ ಶ್ರೀ ಬೆನಕಪ್ಪ ಸ್ವಾಮಿ ದೇವಸ್ಥಾನದ ಬೆನಕನಹಳ್ಳ ತುಂಬಿ ಹರಿಯುತ್ತಿದೆ. ಮಳೆಯಿಂದ ನೀರಿನ ಹರಿವು ಹೆಚ್ಚಾಗಿದ್ದು, ಬಯಲುಸೀಮೆಯ ಉತ್ತರ ಪಿನಾಕಿನಿ ನದಿಯ ತಿರುವುಗಳು ಮತ್ತು ಹೊಳೆಗಳ ಹರಿವು ಸೃಷ್ಟಿಸಿರುವ ಕಿರು ಜಲಪಾತ ಪ್ರಕೃತಿ ಪ್ರಿಯರಿಗೆ ಆಕರ್ಷಣೆ ತಂದಿದೆ. ಹಸಿರು ಗುಡ್ಡಗಳ ನಡುವೆ ಹರಿಯುತ್ತಿರುವ ನೀರಿನ ಮಂಜಿನ ಸಿಂಚನ, ಝುಳು&ಝುಳು ಶಬ್ದ, ಹಕ್ಕಿಗಳ ಕಲರವ, ನವಿಲುಗಳ ನೃತ್ಯ ನೋಡುಗರಿಗೆ ಮಲೆನಾಡಿನ ಅನುಭವ ನೀಡುತ್ತಿದೆ. ಸ್ಥಳಿಯರು ಮತ್ತು ಪ್ರವಾಸಿಗರು ಇವುಗಳ ಮನೋಹರ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಾ, ಇದು ಮಳೆಗಾಲದಲ್ಲಿನ ಅವಿಸ್ಮರಣೀಯ ಅನುಭವ ನೀಡುತ್ತಿದೆ. ದೇವಾಲಯದಲ್ಲಿ ಸರ್ಪ ಸಹಿತ ಕಾಣಿಸುವ ಶಿವಲಿಂಗ ಹಾಗೂ ಗಣೇಶನ ಮುಖ ಹೋಲುವ ಅನನ್ಯ ಉದ್ಭವ ಮೂರ್ತಿಗಳು ಇವೆ. ಈ ಮೂರ್ತಿಗಳಿಗೆ ಸುತ್ತಮುತ್ತಲಿನ ಜನರು ಐದಾರು ತಲೆಮಾರುಗಳಿಂದ ಪೂಜಾ ಪುನಸ್ಕಾರ ನಡೆಸಿಕೊಂಡು ಬಂದಿದ್ದು, ಇದು ಶ್ರದ್ಧಾಭಕ್ತಿಯ ಸ್ಥಳವಾಗಿದೆ.

ಇತ್ತೀಚಿಗೆ ಬೆನಕನಹಳ್ಳ ಸಮೀಪದ ಶನಿ ಮಹಾತ್ಮ ಸ್ವಾಮಿ ಮತ್ತು ಶ್ರೀ ವೇಣುಗೋಪಾಲಸ್ವಾಮಿ ದೇವಾಲಯಗಳೂ ನಿರ್ಮಾಣಗೊಂಡಿದ್ದು, ದೇವಸ್ಥಾನ ಸುತ್ತಮುತ್ತಲಿನ ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಆಕರ್ಷಣೆ ದೊರೆತಿದೆ. ಪ್ರವಾಸಿಗರಿಗೆ ಬೆಂಗಳೂರು ಇಸ್ಕಾನ್​ ದೇವಸ್ಥಾನದ ಗೋಶಾಲೆ ಸಹ ಕಣ್ಮನ ಸೆಳೆಯುತ್ತಿದೆ. ಭಕ್ತರಿಗೆ ಒಂದೆಡೆ ಶ್ರೀ ಬೆನಕಪ್ಪಸ್ವಾಮಿ ದೇವಸ್ಥಾನ ದೈವೀ ಶಾಂತಿ ನೀಡಿದರೆ, ಪ್ರಕೃತಿ ಪ್ರಿಯರಿಗೆ ಮಲೆನಾಡಿನ ಸೌಂದರ್ಯ ನೆನಪಿಸುತ್ತದೆ. ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ 15 ಕಿಮೀ ದೂರದಲ್ಲಿರುವ ಈ ಸ್ಥಳ ವಾರಾಂತ್ಯದ ವಿಹಾರಕ್ಕೆ ಸೂಕ್ತವಾಗಿದೆ. ದೇವಸ್ಥಾನ ಸುತ್ತಮುತ್ತಲೂ ಪೊಲೀಸ್​ ಬೀಟ್​ ಇದ್ದು, ಪ್ರವಾಸಿಗರು ನಿಯಮ ಪಾಲನೆ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net