

ಶಿಗ್ಗಾಂವಿ: ಡಾ. ಅಂಬೇಡ್ಕರ್ ಅವರನ್ನು ಹೆಜ್ಜೆಹೆಜ್ಜೆಗೂ ಅವಮಾನಿಸುತ್ತಿರುವ ಬಿಜೆಪಿ ನಾಯಕರ ನಡವಳಿಕೆ ಖೇದಕರ. ದೇಶದಲ್ಲಿ ಗೋಡ್ಸೆ, ಬ್ರಿಟಿಷ್ ಮಾದರಿಯ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಲು ಮಂದಿನ ದಿನಗಳಲ್ಲಿ ಸಿದ್ದರಾಗಬೇಕಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕುರಿತು ಪಟ್ಟಣದ ಗುಜರಾತ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶತಮಾನೋತ್ಸವ ಸಂಭ್ರಮದ ಮೂಲಕ ಕರ್ನಾಟಕದಿಂದಲೇ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ಕೊಡೋಣ. ಈ ನಿಟ್ಟಿನಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ ನೀರಲಗಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ಗೋಡ್ಸೆ ಮನಸ್ಥಿತಿಯ ಬಿಜೆಪಿ ನಾಯಕರ ವರ್ತನೆಯನ್ನು ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಖಂಡಿಸುವ ಮೂಲಕ ಕಾರ್ಯಕರ್ತರು ಸಜ್ಜಾಗಬೇಕಿದೆ. ಉಪ ಚುನಾವಣೆಯಲ್ಲಿ ಕಾರ್ಯಕರ್ತರ ಸಂಘಟಿತ ಪ್ರಯತ್ನದ ಮೂಲಕ 17 ವರ್ಷದ ವನವಾಸ ಕೊನೆಗೊಂಡಂತಾಗಿದೆ. ಪಕ್ಷದ ಎಲ್ಲ ವರಿಷ್ಠರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿ. 26ರಂದು ಸಭೆ ಮಾಡಿ, 27ರಂದು ಕಾರ್ಯಕರ್ತರ ಮಹಾ ಸಮಾವೇಶದಲ್ಲಿ ಹಾವೇರಿ ಜಿಲ್ಲೆಯ ಸುಮಾರು 25 ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದರು.
ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್ ಮಾತನಾಡಿ, ಶಿಗ್ಗಾಂವಿ ಉಪಚುನಾವಣೆಯಲ್ಲಿ ನನ್ನ ಶ್ರಮ ಅನ್ನುವುದಕ್ಕಿಂತ ಪಕ್ಷದ ಕಾರ್ಯಕರ್ತರ ಶ್ರಮದಿಂದ ಗೆಲ್ಲಲು ಸಾಧ್ಯವಾಗಿದೆ. ಜಿಲ್ಲಾಧ್ಯಕ್ಷರು ಮತ್ತು ಎರಡೂ ತಾಲೂಕಿನ ಬ್ಲಾಕ್ ಅಧ್ಯಕ್ಷರು ಸಹಕಾರ ನೀಡಿದರು. ಬೊಮ್ಮಯಿ ಸಾಮ್ರಾಜ್ಯಕ್ಕೆ ಅಂತ್ಯ ಹಾಡಲು ಇಲ್ಲಿನ ಕಾರ್ಯಕರ್ತರ ಶ್ರಮಕ್ಕೆ ಅಭಿನಂದನೆ ಹೇಳುತ್ತೇನೆ. ಮಂದಿನ ಅರವತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ಪಕ್ಷ ಅಡಳಿತ ನಡೆಸಲಿದೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ, ಶಿಗ್ಗಾಂವಿ ಬ್ಲಾಕ್ ಅಧ್ಯಕ್ಷ ಬಿ.ಸಿ. ಪಾಟೀಲ, ಸವಣೂರ ಬ್ಲಾಕ್ ಅಧ್ಯಕ್ಷ ಎಂಜೇ ಮುಲ್ಲಾ, ಶೇಖಪ್ಪ ಮನಕಟ್ಟಿ, ಹನಮಂತಪ್ಪ ಬಂಡಿವಡ್ಡರ, ಗುಡ್ಡಪ್ಪ ಜಲದಿ, ಮಲ್ಲಮ್ಮ ಸೋಮನಕಟ್ಟಿ, ಶಂಭುಲಿಂಗ ಅಜೂರ, ಸುಧೀರ ಲಮಾಣಿ ಇತರರಿದ್ದರು.