

ತುಮಕೂರು: ಮಹಾನಗರ ಪಾಲಿಕೆ, ರಾಕ್ ಯೂತ್ ಕ್ಲಬ್ ಸಹಯೋಗದಲ್ಲಿ ಸ್ಚಚ್ಛ ಸರ್ವೇಕ್ಷಣಾ ಅಭಿಯಾನದ ಅಂಗವಾಗಿ ಏರ್ಪಡಿಸಿರುವ ಮೇಯರ್ಸ್ ಕಪ್ 2020 ಕ್ರೀಡಾಕೂಟಕ್ಕೆ ಶನಿವಾರ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸ್ವಾಮೀಜಿ, ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಸ್ವಾಸ್ಥ್ಯ ಪಡೆಯಲು ಸಾಧ್ಯವಿದ್ದು, ತುಮಕೂರು ನಗರದಲ್ಲಿ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು, ಈ ನಿಟ್ಟಿನಲ್ಲಿ ಕ್ರೀಡಾ ಸಂಘಗಳು ಹಾಗೂ ಸ್ಥಳೀಯ ಆಡಳಿತ ಮುಂದಾಗಬೇಕು ಎಂಬ ಸಲಹೆಯಿತ್ತರು.
ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿವೇ ಹೊರತು ಸೋಲು- ಗೆಲುವಲ್ಲ, ಕ್ರೀಡೆಯಿಂದ ಸಮಯ ಪ್ರಜ್ಞೆ, ಶಿಸ್ತು ಬೆಳೆಯುವುದಲ್ಲದೇ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಯುವುದು, ಕ್ರೀಡಾಕೂಟದ ಮೂಲಕ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯ ಅನುಕರಣೀಯ ಎಂದು ಮೆಚ್ಚಗೆ ವ್ಯಕ್ತಪಡಿಸಿದರು.
ಕ್ರೀಡಾಕೂಟದ ಮೂಲಕ ಪಾಲಿಕೆ ಸಿಬ್ಬಂದಿಗೆ ಮಾನಸಿಕ ಒತ್ತಡ ನಿವಾರಣೆಯಾಗಲಿದೆ, ಸ್ವಚ್ಛ ಭಾರತ ಸರ್ವೇಕ್ಷಣಾ ಅಭಿಯಾನದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂಬ ಸುದುದ್ದೇಶದಿಂದ ಕ್ರೀಡಾ ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ ಎಂದು ಮೇಯರ್ ಫರೀದಾ ಬೇಗಂ ತಿಳಿಸಿದರು.
ಕರೊನಾ ಸೇನಾನಿಗಳಾಗಿ ಪಾಲಿಕೆ ಸಿಬ್ಬಂದಿ ಹಾಗೂ ನೌಕರರು ಕಾರ್ಯನಿರ್ವಹಿಸಿದ್ದು, ಕಳೆದ 9 ತಿಂಗಳಿಂದ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವವರಿಗೆ ಒತ್ತಡ ನಿವಾರಣೆ ನಿಟ್ಟಿನಲ್ಲಿ, ಪಾಲಿಕೆ ಕ್ರೀಡಾ ಅನುದಾನದಲ್ಲಿ ಸಪ್ತಾಹ ಆಯೋಜಿಸಿದೆ, ಪಾಲಿಕೆ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಕಬ್ಬಡಿ ತರಬೇತುದಾರ ಇಸ್ಮಾಯಿಲ್ ಮತ್ತಿತರರು ಇದ್ದರು.
14ರಿಂದ 16ರವರೆಗೆ ಸಪ್ತಾಹ: ಎರಡು ದಿನಗಳ ಕ್ರಿಕೆಟ್ ಟೂರ್ನಿಯಲ್ಲಿ ಜಿಲ್ಲೆಯ 8 ತಂಡಗಳು ಭಾಗವಹಿಸಿದ್ದು, ವಿಜೇತರಾದ ತಂಡಕ್ಕೆ 1 ಲಕ್ಷ ರೂ. ಪ್ರಥಮ ಬಹುಮಾನವಿದೆ, ಡಿ.14ರಿಂದ 16ರವರೆಗೆ ನಡೆಯಲಿರುವ ಸಪ್ತಾಹದಲ್ಲಿ ಪೌರ ಕಾರ್ಮಿಕರು, ಸದಸ್ಯರು ಹಾಗೂ ಸಿಬ್ಬಂದಿಗೆ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ, ನಂತರ 2 ದಿನ ಕಬ್ಬಡಿ ಕ್ರೀಡಾಕೂಟ ಕೂಡ ಏರ್ಪಡಿಸಲಾಗಿದ್ದು, ವಿಜೇತರಾದ ತಂಡಕ್ಕೂ 1 ಲಕ್ಷ ರೂ. ನಗದು ಹಾಗೂ ಪಾರಿತೋಷಕ ನೀಡಲಾಗುತ್ತಿದೆ.ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಈಗಾಗಲೇ ಪ್ರತಿ ವರ್ಷ ಮೇಯರ್ಸ್ ಕಪ್ ಆಯೋಜಿಸಲಾಗುತ್ತಿದ್ದು, ತುಮಕೂರು ನಗರದಲ್ಲಿ ಮೊದಲ ಬಾರಿಗೆ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾ ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ.
ಪಾಲಿಕೆ ಸದಸ್ಯರು ಗೈರು!: ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪಾಲಿಕೆ ಸದಸ್ಯ ಶಿವರಾಂ ಹೊರತು ಪಡಿಸಿ ಉಪಮೇಯರ್ ಶಶಿಕಲಾ ಸಹಿತ ಉಳಿದ ಯಾವ ಸದಸ್ಯರೂ ಹಾಜರಾಗದಿದ್ದು ಆಶ್ಚರ್ಯ ಮೂಡಿಸಿತು. ಸ್ಥಳೀಯ ಸದಸ್ಯೆ ಗಿರಿಜಾ ಸೇರಿ ಯಾರೊಬ್ಬರು ಇತ್ತ ಕಡೆ ತಲೆಹಾಕದಿರುವುದು ಕ್ರೀಡಾಕೂಟ ಆಯೋಜನೆಯ ಸದಸ್ಯರಲ್ಲೇ ಅಪಸ್ವರ ಇರುವುದು ಬಯಲಾಗಿದೆ. ಸಮಾರಂಭದಲ್ಲಿ ಮೇಯರ್ ಫರಿದಾಬೇಗಂ ಜತೆ ಅವರ ಪತಿ ಹಫೀಜ್ ವೇದಿಕೆಯಲ್ಲಿ ಕಾಣಿಸಿಕೊಂಡರು.