ಇಂದಿನಿಂದ ದಾಸೋಹ ಆರಂಭ, ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾಹಿತಿ ಶ್ರೀಗಳೊಂದಿಗೆ ಶಾಸಕ ಚರ್ಚೆ

16 Nela ph 01 MLA Visit To Mutt
Published on

ನೆಲಮಂಗಲ: ಏ.17ರ ಬೆಳಗಿನಿಂದಲೇ ಬಸವಣ್ಣ ದೇವರ ಮಠದಲ್ಲಿ ದಾಸೋಹ ವ್ಯವಸ್ಥೆ ಪುನರಾರಂಭಿಸಲಾಗುವುದು, ಇದಕ್ಕೆ ತಾಲೂಕು ಆಡಳಿತ ಕೈಜೋಡಿಸಲಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಬಸವಣ್ಣ ದೇವರಮಠಕ್ಕೆ ಗುರುವಾರ ಭೇಟಿ ನೀಡಿದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿ ದಾಸೋಹ ವ್ಯವಸ್ಥೆ ಆರಂಭಿಸುವಂತೆ ಮನವಿ ಮಾಡಿದರು. ತಾಲೂಕು ಆಡಳಿತದ ಅಧಿಕಾರಿಗಳು, ನಗರಸಭೆ ಸದಸ್ಯರೊಂದಿಗೆ ಆಗಮಿಸಿದ ಶಾಸಕರು, ತಹಸೀಲ್ದಾರ್, ಬಿಇಒ ಶ್ರೀ ಸಿದ್ದಲಿಂಗ ಸ್ವಾಮೀಜಿಯೊಂದಿಗೆ ಗುರುವಾರ ಅರ್ಧ ಗಂಟೆ ಗೌಪ್ಯ ಮಾತುಕತೆ ನಡೆಸಿ, ಬಳಿಕ ಮಾಹಿತಿ ನೀಡಿದರು.

ಮಠದ ಭಕ್ತರು, ದಾನಿಗಳು, ಪಕ್ಷ, ಜಾತ್ಯಾತೀತ ಮನೋಭಾವದ ಮುಖಂಡರು, ಸ್ವಯಂಸೇವಕರ ಪರಿಶ್ರಮದಿಂದಾಗಿ 18 ದಿನ ಕೂಲಿಕಾರ್ಮಿಕರು, ನಿರಾಶ್ರಿತರು ಸೇರಿ ಕರ್ತವ್ಯನಿರತ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಿದ್ದು 2 ದಿನ ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿಸಿದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿ ಸ್ಥಳೀಯ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ದಾಸೋಹ ವ್ಯವಸ್ಥೆ ಆರಂಭಿಸುವಂತೆ ಮನವಿ ಮಾಡಿದ್ದು, ಶುಕ್ರವಾರದಿಂದ ನಡೆಯಲಿದೆ ಎಂದರು.

ಬಸವಣ್ಣ ದೇವರ ಮಠದಲ್ಲಿ ನಡೆಯುತ್ತಿದ್ದ ದಾಸೋಹ ವ್ಯವಸ್ಥೆ ಬಗೆಗಿನ ತಪ್ಪು ಮಾಹಿತಿ ಒಂದೆಡೆಯಾದರೆ ಸುದ್ದಿಗೋಷ್ಠಿಯಲ್ಲಿನ ವಿಡಿಯೋ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಬೇಸರ ಉಂಟು ಮಾಡಿದ್ದರ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರನ್ನು ನೇರವಾಗಿ ಭೇಟಿ ಮಾಡಿ ಸತ್ಯಾಸತ್ಯತೆ ಮನವರಿಕೆ ಮಾಡಿಕೊಡಲಾಗಿದೆ. ದಾಸೋಹ ವ್ಯವಸ್ಥೆ ಆರಂಭಿಸುವಂತೆ ಮನವಿ ಮಾಡಿದ್ದು, ಶ್ರೀಗಳು ಒಪ್ಪಿದ್ದಾರೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

ಬಿಇಒ ಕೆ.ಸಿ.ರಮೇಶ್, ನಗರಸಭೆ ಸದಸ್ಯ ಎಂ.ರಮೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಮುಖಂಡರಾದ ಎ.ಪಿಳ್ಳಪ್ಪ, ನಾರಾಯಣ್‌ರಾವ್. ಎಚ್.ಬಿ.ಮಂಜುನಾಥ್, ನರಸಿಂಹಮೂರ್ತಿ, ಕೆ.ಎಂ.ಶಿವಕುಮಾರ್, ಎನ್.ಆಂಜಿನಪ್ಪ, ಪದ್ಮನಾಭ್‌ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net