

ಮೂಡಿಗೆರೆ: ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷದ ಆಡಳಿತದಲ್ಲಿ ದೇಶದ ಜನ ಸಾಕಷ್ಟು ಬದಲಾವಣೆ ನೋಡಿದ್ದಾರೆ. ದೇಶದಲ್ಲಿ ಅಭಿವೃದ್ಧಿಯ ಮಹಾಪೂರವೆ ಹರಿದಿದೆ ಎಂಬುದು ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟದ ಸದಸ್ಯರ ಪ್ರಮಾಣ ವಚನ ಸ್ವೀಕಾರದ ನಂತರ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 60 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ದೇಶದ ಜನ ಈ ರೀತಿಯ ಅಭಿವೃದ್ಧಿ ನೋಡಲು ಸಾಧ್ಯವಾಗಿರಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಯಾವ ಯೋಜನೆಯೂ ಜಾರಿಯಾಗಿರಲಿಲ್ಲ. ಹಾಗಾಗಿ ದೇಶದ ಜನ ಬಿಜೆಪಿಯನ್ನು 3ನೇ ಬಾರಿ ಚುನಾಯಿಸಿ ಕೇಂದ್ರದಲ್ಲಿ ಅಧಿಕಾರ ನೀಡಿದ್ದಾರೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಮಂದಿ ಕಾಂಗ್ರೆಸ್ ಶಾಸಕರಿದ್ದರೂ ಕೂಡ ಎಲ್ಲ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ಗಿಂತ ಹೆಚ್ಚು ಮತಗಳಿಸಿದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯನ್ನು ಜನ ಒಪ್ಪಿಕೊಂಡಿಲ್ಲ ಎಂದು ಫಲಿತಾಂಶದಿಂದ ಸಾಬೀತಾಗಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಹ್ಯಾಟ್ರಿಕ್ ಸಾಧನೆಯಿಂದ ದೇಶ ಇನ್ನಷ್ಟು ಬಲಶಾಲಿಯಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಜೆಡಿಎಸ್-ಬಿಜೆಪಿ ಮೈತ್ರಿಗೆ ಜನರಿಂದ ಉತ್ತಮ ಬೆಂಬಲ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ದರ್ಜೆ ಸಚಿವರಾಗಿರುವುದರಿಂದ ಅವರು ಪ್ರತಿನಿಧಿಸಿರುವ ಮಂಡ್ಯ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಲಿದ್ದಾರೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಂ.ಗಜೇಂದ್ರ, ತಾಲೂಕು ಜೆಡಿಎಸ್ ಅಧ್ಯಕ್ಷ ಲಕ್ಷ್ಮಣಗೌಡ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಮುಖಂಡರಾದ ಜೆ.ಎಸ್.ರಘು, ಪರೀಕ್ಷಿತ ಜಾವಳಿ, ಪ್ರಶಾಂತ್, ಪಂಚಾಕ್ಷರಿ, ಸಚಿನ್, ಕಾಮಾಕ್ಷಿ, ಸರೋಜಾ ಸುರೇಂದ್ರ, ಕಮಲಮ್ಮ, ತಾರೆಶ್, ದುಂಡುಗ ಪ್ರಮೋದ್ ಇತರರಿದ್ದರು.