ಕುವೆಂಪು ಕಾದಂಬರಿಯಲ್ಲಿ ಅಡಗಿದೆ ನಿಸರ್ಗ ಸೌಂದರ್ಯ

19 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕುವೆಂಪು ಕಾದಂಬರಿಗಳಲ್ಲಿ ನಿಸರ್ಗದ ನೆಲೆ ಹಾಗೂ ಹಿನ್ನೆಲೆಯನ್ನು ಮನಮೋಹಕವಾಗಿ ಚಿತ್ರಿಸಲಾಗಿದ್ದು, ಅಲ್ಲಿ ಸೌಂದರ್ಯದ ಅನುಭೂತಿ ಇದೆ ಎಂದು ನಿಗದಿ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಡಾ.ಶ್ರೀಧರ ಹೆಗಡೆ ಭದ್ರನ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಶ್ಮಿ ಮಂಜುನಾಥ ನಾಯಕ ಸ್ಮರಣೆ ದತ್ತಿ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕುವೆಂಪು ಕಾದಂಬರಿಯಲ್ಲಿ ನಿಸರ್ಗ ಕುರಿತು ಉಪನ್ಯಾಸ ನೀಡಿದರು.
ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ಹುಟ್ಟಿ ಬೆಳೆದಿದ್ದರಿಂದ ಸಹಜವಾಗಿ ತಮ್ಮ ಎರಡು ಕಾದಂಬರಿಗಳಲ್ಲಿ ನಿಸರ್ಗದ ರಮಣೀಯತೆಯನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ. ನಿಸರ್ಗವೇ ಪ್ರಧಾನ ಅಂಶವಾದ ಕಾದಂಬರಿಗಳಲ್ಲಿ ಸೂರ್ಯೋದಯ, ಮಳೆಗಾಲದ ದೃಶ್ಯ, ಮಂಜಿನ ರಾಶಿ, ಕಾಡು ಪ್ರಾಣಿಗಳು, ನದಿ, ಅರಣ್ಯಗಳ ಸನ್ನಿವೇಶಗಳನ್ನು ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಕಾದಂಬರಿಗಳಲ್ಲಿ ನಿಸರ್ಗ ಒಂದು ತತ್ವವಾಗಿ ಪ್ರವಹಿಸಿದೆ. ಕೆಲ ಸ್ಥಳಗಳ ವಿಹಂಗಮ ನೋಟಗಳು ಸಹ ಇವೆ ಎಂದರು.
ವಿಟಿಯು ವಿಶೇಷಾಧಿಕಾರಿ ಮನೋಹರ ನಾಯಕ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ರೋಹನ ಚಿವಟೆ, ಸಂಜನಾ ಅಂಗಡಿ, ಆಯುಷ್ ಜೋಗಳೆಕರ, ಸಾಚಿ ಹೊಂಗಲಮಠ, ವಿನೋದಾ ಹಳಕಟ್ಟಿ, ಅಮನ್ ಅಹ್ಮದ ಖಾನ್ ಅವರಿಗೆ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ದತ್ತಿ ದಾನಿ ಕೆ.ಎಚ್. ನಾಯಕ, ಶಂಕರ ಕುಂಬಿ, ಶಂಕರ ಹಲಗತ್ತಿ, ಎಂ.ಎಂ. ಚಿಕ್ಕಮಠ, ಡಾ. ಬಾಳಣ್ಣ ಶೀಗಿಹಳ್ಳಿ, ನಿಂಗಣ್ಣ ಕುಂಟಿ, ಡಾ. ಬಾಳಪ್ಪ ಚಿನಗುಡಿ, ಬೇಬಿ ನಾಯಕ, ಸವಿತಾ ನಾಯಕ, ಪದ್ಮಾವತಿ ಶೀಗಿಹಳ್ಳಿ, ಅಶೋಕ ನಾಯಕ, ಡಾ. ವಿಲಾಸ ಕುಲಕರ್ಣಿ, ಡಾ. ವಿಶ್ವನಾಥ ಕೊರವಿ, ಆರ್.ಜಿ. ತಿಮ್ಮಾಪುರ, ಬಿ.ಬಿ. ನಾಯಕ, ಮಹಾಂತೇಶ ನರೇಗಲ್, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net