

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛತೆಯಲ್ಲಿ ಈ ಬಾರಿ ಮೈಸೂರು ನಗರ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆಯನ್ನೇ ತೋರಿದೆ. ಆದರೆ, ನಗರದ ಸೌಂದರೀಕರಣ ಹಾಗೂ ಸಾರ್ವಜನಿಕ ಶೌಚಾಗೃಹಗಳ ಶುಚಿತ್ವ ಕಾಪಾಡುವಲ್ಲಿ ನಗರ ಅಲ್ಪ ಪ್ರಮಾಣದ ಹಿನ್ನಡೆ ಕಂಡಿದೆ.
ಸಮಗ್ರ ವಿಭಾಗದಲ್ಲಿ ಇಂದೋರ್ ನಗರ ಸತತ 6ನೇ ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದುಕೊಂಡಿದ್ದು, ಈ ವಿಭಾಗದಲ್ಲಿ ಮೈಸೂರು 8ನೇ ಸ್ಥಾನದಲ್ಲಿ ಇದೆ. ಮೈಸೂರು 8ನೇ ಸ್ಥಾನದಲ್ಲಿದ್ದರೂ ನಂ.1ನೇ ಸ್ಥಾನದಲ್ಲಿರುವ ಇಂದೋರ್‌ಗಿಂತ ಸ್ವಚ್ಛತೆಯಲ್ಲೇನು ಹಿಂದೆ ಬಿದ್ದಿಲ್ಲ. ಹಲವು ವಿಭಾಗಗಳಲ್ಲಿ ಇಂದೋರ್‌ನಷ್ಟೇ ಸಾಧನೆಯನ್ನು ಮೈಸೂರು ಸಹ ತೋರಿದೆ. ಆದರೆ, ಮುಂದಿನ ದಿನಗಳಲ್ಲಿ ನಗರದ ಸೌಂದರ್ಯ ವೃದ್ಧಿ ಹಾಗೂ ಅತ್ಯಾಧುನಿಕ ಶೌಚಗೃಹ ನಿರ್ಮಾಣದ ಕಡೆಗೆ ಮೈಸೂರು ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ.
ನಗರದ ರಸ್ತೆ ವಿಭಜಕಗಳಲ್ಲಿ ಅಲಂಕಾರಿಕ ಸಸಿಗಳನ್ನು ನೆಡುವ ಕಾರ್ಯ ಈ ಹಿಂದೆ ಉತ್ತಮವಾಗಿ ನಡೆಯಿತು. ಆದರೆ, ಕೋವಿಡ್ ನಂತರದ ವರ್ಷಗಳಲ್ಲಿ ನಗರದ ಸೌಂದರೀಕರಣಕ್ಕೆ ಪಾಲಿಕೆ ಹೆಚ್ಚಿನ ಒತ್ತು ನೀಡಿಲ್ಲ. ರಸ್ತೆ ವಿಭಜಕದಲ್ಲಿ ಬೆಳೆದು ನಿಂತಿರುವ ಅಲಂಕಾರಿಕ ಗಿಡಗಳನ್ನು ಟ್ರಿಮ್ ಮಾಡುವ ಕಾರ್ಯಕ್ಕೂ ಪಾಲಿಕೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಗಿಡಗಳು ಕಾಡು ಪೊದೆಗಳ ರೀತಿ ಬೆಳೆದುಕೊಂಡಿದೆ. ನಗರ ಪ್ರಮುಖ ರಸ್ತೆಗಳಲ್ಲಿ ಅಲಂಕಾರಿಕ ಸಸ್ಯಗಳು ಉತ್ತಮವಾಗಿ ಬೆಳೆದಿದ್ದು, ಉಳಿದ ರಸ್ತೆಗಳಲ್ಲೂ ಸಹ ಇದೇ ರೀತಿ ಅಲಂಕಾರಿಕ ಸಸ್ಯಗಳನ್ನು ಬೆಳೆಸಲು ಪಾಲಿಕೆ ಗಮನ ಹರಿಸಬೇಕು. ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಫ್ಲೆಕ್ಸ್, ಬ್ಯಾನರ್‌ಗಳಿಗೆ ಕಡಿವಾಣ ಹಾಕಬೇಕು. ಜತೆಗೆ ನಗರದ ಸೌಂದರ್ಯ ವೃದ್ಧಿಸುವ ವಾಲ್ ಪೇಟಿಂಗ್ ಸೇರಿದಂತೆ ಇನ್ನಿತರ ಚಟುವಟಿಕೆಗಳ ಕಡೆಗೆ ಪಾಲಿಕೆ ಗಮನ ಹರಿಸುವ ಅವಶ್ಯಕತೆ ಇದೆ.
ನಗರದಲ್ಲಿ ಅಳವಡಿಸಿದ ಇ-ಟಾಯ್ಲೆಟ್ ನಿರ್ವಹಣೆ ಕೊರತೆಯಿಂದ ಬಾಗಿಲು ಮುಚ್ಚಿದೆ. ಜತೆಗೆ ನಗರದ ಹಲವಾರು ಕಡೆಗಳಲ್ಲಿ ಹಳೆಯ ಮಾದರಿಯ ಶೌಚಗೃಹಗಳು ಇವೆ. ಅವುಗಳನ್ನು ಅತ್ಯಾಧುನಿಕ ಶೌಚಗೃಹಗಳಾಗಿ ಬದಲಾಯಿಸುವ ಕಡೆಗೆ ಪಾಲಿಕೆ ಗಮನ ಹರಿಸುವ ಮೂಲಕ ನಗರ ಮುಂದಿನ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಧನೆ ತೋರುವ ಮೂಲಕ ಮತ್ತೆ ನಂ.1 ಸ್ಥಾನಕ್ಕೆ ಮರಳ ಬೇಕಾಗಿದೆ.
ಯಾವೆಲ್ಲ ವಿಭಾಗದಲ್ಲಿ ಸಾಧನೆ:
ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರದ ಸ್ವಚ್ಛತೆಯನ್ನು 11 ವಿಭಾಗಗಳಲ್ಲಿ ಅಳೆಯಲಾಗಿದೆ. ನಗರದ ಸ್ವಚ್ಛತೆ ಹಾಗೂ ಸೌಂದರೀ ಕರಣದ ಆಧಾರದ ಮೇಲೆ ಶೇಕಡವಾರು ಅಂಕಗಳನ್ನು ನೀಡಲಾಗಿದೆ. ಮೈಸೂರು ನಗರ 9 ವಿಭಾಗದಲ್ಲಿ ಅತ್ಯುತ್ತಮ, 2 ವಿಭಾಗದಲ್ಲಿ ಉತ್ತಮ ಸಾಧನೆ ತೋರಿದೆ. ಕಳಪೆ ಸಾಧನೆಯನ್ನು ಯಾವ ವಿಭಾಗದಲ್ಲೂ ತೋರಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಸಾರ್ವಜನಿಕ ಶೌಚಾಗೃಹಗಳ ಶುಚಿತ್ವ ಮತ್ತು ನಗರ ಸೌಂದರೀಕರಣ ವಿಭಾಗದಲ್ಲಿ ನಗರ ಉತ್ತಮ (ಶೇ.75 ರಿಂದ 90 ಅಂಕಗಳು) ಸಾಧನೆ ತೋರಿದೆ. ಮನೆ ಮನೆಗಳಿಂದ ಹಸಿ ಕಸ ಮತ್ತು ಒಣಕಸವನ್ನು ವಿಂಗಡಿಸಿ ಪಡೆಯುವುದು, ನಗರದ ರಸ್ತೆಗಳ ಸ್ವಚ್ಛತೆ, ಮಾರುಕಟ್ಟೆಗಳ ಸ್ವಚ್ಛತೆ, ಬಡಾವಣೆಗಳ ಸ್ವಚ್ಛತೆ, ಚರಂಡಿಗಳ ಸ್ವಚ್ಛತೆ, ಜಲಮೂಲಗಳ ಸ್ವಚ್ಛತೆ, ಬಡಾವಣೆಗಳಲ್ಲಿ ದೈನಂದಿನ ಸ್ವಚ್ಛತಾ ಕಾರ್ಯ, ತ್ಯಾಜ್ಯದ ಕಂಟೇನರ್ ಅಥವಾ ಕಸದ ತೊಟ್ಟಿ ಮುಕ್ತ ನಗರ ಹಾಗೂ ನಾಗರಿಕರ ಕುಂದು ಕೊರತೆ ಪರಿಹರಿಸುವ ವಿಭಾಗದಲ್ಲಿ ಅತ್ಯುತ್ತಮ (ಶೇ.90ಕ್ಕಿಂತ ಹೆಚ್ಚು ಅಂಕ) ಸಾಧನೆ ತೋರಿದೆ. ಇಂದೋರ್ ನಗರ 11 ವಿಭಾಗದಲ್ಲೂ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, ಅತ್ಯುತ್ತಮ ಸಾಧನೆ ತೋರಿದೆ.
ಪಡೆದ ಅಂಕಗಳೆಷ್ಟು?:
ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಒಟ್ಟು 7,500 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ಈ ಪೈಕಿ ಮೈಸೂರು ನಗರ 6,566.44 ಅಂಕಗಳನ್ನು ಪಡೆದು ಸಮಗ್ರ ವಿಭಾಗದಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಮೈಸೂರು 11ನೇ ಸ್ಥಾನದಲ್ಲಿ ಇತ್ತು. ನಂ.1ನೇ ಸ್ಥಾನ ಪಡೆದ ಇಂದೋರ್ 7,146.41, ದ್ವಿತೀಯ ಸ್ಥಾನ ಪಡೆದ ಸೂರತ್ 6,924.84, ತೃತೀಯ ಸ್ಥಾನ ಪಡೆದ ನವಿ ಮುಂಬೈ 6,852.91 ಅಂಕಗಳನ್ನು ಪಡೆದುಕೊಂಡಿದೆ. 7,500 ಅಂಕಗಳನ್ನು ಮೂರು ವಿಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ. ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗಕ್ಕೆ 3,000 ಅಂಕಗಳು, ಸಿಟಿಜನ್ ವಾಯ್ಸ ಮತ್ತು ಸರ್ಟಿಫಿಕೇಷನ್ ವಿಭಾಗಕ್ಕೆ ತಲಾ 2,250 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.
ಈ ಪೈಕಿ ಸರ್ವಿಸ್ ಲೆವಲ್‌ಪ್ರೋಗ್ರೆಸ್‌ನಲ್ಲಿ ಮೈಸೂರು 2,452.02, ಇಂದೋರ್ 2,701.71, ಸಿಟಿಜನ್ ವಾಯ್ಸನಲ್ಲಿ ಮೈಸೂರು 2,064.41, ಇಂದೋರ್ 2,194.70 ಅಂಕಗಳನ್ನು ಪಡೆದುಕೊಂಡಿದೆ. ಸರ್ಟಿಫಿಕೇಷನ್‌ನಲ್ಲಿ ಮೈಸೂರು ಮತ್ತು ಇಂದೋರ್ ತಲಾ 2,250 ಅಂಕಗಳನ್ನು ಪಡೆದುಕೊಂಡಿದೆ. ಈ ಬಾರಿ ಸಿಟಿಜನ್ ವಾಯ್ಸನಲ್ಲೂ ಮೈಸೂರಿನ ಸಾಧನೆ ತೃಪ್ತಿಕರವಾಗಿದೆ. ಆದರೆ, ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿದೆ.
ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಅಂಕಗಳನ್ನು ನೀಡುವ ಸಂದರ್ಭ ಮನೆ ಮನೆಗಳಿಂದ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ನೀಡಲಾಗುತ್ತಿದೆಯೇ?, ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸಂಸ್ಕರಣೆ ಮಾಡಲಾಗುತ್ತಿದೆಯೇ? ನಗರದಲ್ಲಿ ನೈರ್ಮಲ್ಯವನ್ನು ಸದಾ ಉತ್ತಮವಾಗಿ ಕಾಪಾಡಲಾಗುತ್ತಿದೆಯೇ?, ಒಳಚರಂಡಿ ಶುಚಿಗೊಳಿಸಲು ಯಂತ್ರೋಪಕರಣ ಬಳಕೆ ಮಾಡಲಾಗುತ್ತಿದೆಯೇ ಎಂಬ ಅಂಶಗಳನ್ನು ಪ್ರಮುಖವಾಗಿ ಗಮನಿಸಲಾಗಿದೆ.
ನಗರದಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ ಹಾಗೂ ಸಂಸ್ಕರಣೆ ಉತ್ತಮವಾಗಿ ನಡೆಯುತ್ತಿದೆ. ಸೂಯೇಜ್ ಫಾರ್ಮ್‌ನಲ್ಲಿರುವ ಹಳೆಯ ತ್ಯಾಜ್ಯದ ರಾಶಿ ವಿಲೇವಾರಿಯಾದರೆ ಮೈಸೂರು ನಗರ ಇಂದೋರ್ ನಗರವನ್ನು ಹಿಂದಿಕ್ಕುವುದು ನಿಶ್ಚಿತ. ಸ್ವಚ್ಛ ಸರ್ವೇಕ್ಷಣೆಯ ಪ್ರಕಾರ ನಗರದಲ್ಲಿ ಅತ್ಯಾಧುನಿಕ ಮಾದರಿಯ ಶೌಚಗೃಹಗಳು ಇರಬೇಕು. ಆದರೆ, ನಮ್ಮಲ್ಲಿ ಹಲವಾರು ಕಡೆಗಳಲ್ಲಿ ಹಳೆಯ ಮಾದರಿಯ ಶೌಚಾಲಗಳು ಇದ್ದು, ಅವುಗಳನ್ನು ಹಂತ ಹಂತವಾಗಿ ಬದಲಾಯಿಸಲಾಗುವುದು. ನಗರದ ಸೌಂದರೀಕರಣಕ್ಕೆ ಮತ್ತೆ ಹೆಚ್ಚಿನ ಒತ್ತು ನೀಡಲು ಗಮನ ಹರಿಸಲಾಗುವುದು. ಸ್ವಚ್ಛತೆಯಲ್ಲಿ ಕೆಲವು ಸಣ್ಣಪುಟ್ಟ ಲೋಪಗಳನ್ನು ಹೊರತು ಪಡಿಸಿದರೆ ಮೈಸೂರು ನಗರ ಸ್ವಚ್ಛತೆಯಲ್ಲಿ ಸದಾ ಮುಂದಿದೆ.
ಡಾ.ಡಿ.ಜಿ. ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ