

ಬೆಂಗಳೂರು: ಮಹಾನಗರದಲ್ಲಿ ಬಿಬಿಎಂಪಿಗೆ ಸಂಬಂಧಿಸಿದ ವಿವಿಧ ಯೋಜನೆಗಳು ವಿಳಂಬವಾಗಿರುವ ಸಮಯದಲ್ಲೇ, ಗುತ್ತಿಗೆದಾರರು ತಮ್ಮ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಸೋಮವಾರದಿಂದ ಎಲ್ಲ ಬಗೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ.
ಮೂರು ವರ್ಷದ ಹಳೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ.25 ಬಿಲ್ ಬಾಕಿ ಈವರೆಗೂ ಪಾವತಿಯಾಗಿಲ್ಲ. ಇದರ ಮೊತ್ತವೇ 1,500 ಕೋಟಿ ರೂ. ಆಗಿದ್ದು, ಕಂಟ್ರಾಕ್ಟರ್‌ಗಳು ಸಾಲ ಮಾಡಿದ ಹಣವನ್ನು ಹೂಡಿ ಹೊಸ ಕೆಲಸ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ನೂರಾರು ಗುತ್ತಿಗೆದಾರರು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಣ್ಣ ಗುತ್ತಿಗೆ ಕೆಲಸ ಮಾಡುವವರು ಸೇರಿ ಬಹುತೇಕ ಎಲ್ಲ ಕಂಟ್ರಾಕ್ಟರ್‌ಗಳೂ ಭಾಗಿಯಾಗಿದ್ದಾರೆ. ಇದರಿಂದಾಗಿ ಹಾಲಿ ನಡೆಯುತ್ತಿರುವ ರಸ್ತೆಗುಂಡಿ ಮುಚ್ಚುವುದು, ಹೂಳೆತ್ತುವ ಕೆಲಸ ಹಾಗೂ ವಾರ್ಡ್‌ಗಳಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿಗಳು ಸ್ತಬ್ಧಗೊಂಡಿವೆ. ಮಂಗಳವಾರದಿಂದ ಬೃಹತ್ ನೀರುಗಾಲುವೆ ಹಾಗೂ ವೈಟ್ ಟಾಪಿಂಗ್ ಕಾಮಗಾರಿಗಳು ಸ್ಥಗಿತಗೊಳ್ಳಲಿವೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್, ಹಿಂದಿನ ವರ್ಷಗಳಲ್ಲಿ ಕಂಟ್ರಾಕ್ಟರ್‌ಗಳು ಕೈಗೊಂಡಿರುವ ಕಾಮಗಾರಿಗಳಲ್ಲಿ ಶೇ.75 ಹಣವನ್ನು ಮಾತ್ರ ಪಾವತಿಸಿ ಉಳಿದ ಶೇ.25 ಬಿಲ್ ಪಾವತಿಸದ ಕಾರಣ ಸಮಸ್ಯೆ ಉಂಟಾಗಿದೆ. ಸ್ವತ: ಡಿಸಿಎಂ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದರೂ, ಪಾಲಿಕೆ ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ಆಡಳಿತ ನಡೆಸುತ್ತಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸ್ಪಂದನೆ ವ್ಯಕ್ತವಾಗದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಆಮರಣಾಂತ ಉಪವಾಸ:
ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ಪೊಲೀಸರು ಸಂಘದ ಪದಾಧಿಕಾರಿಗಳ ವಿರುದ್ಧ ಹರಿಹಾಯ್ದರು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇದ್ದರೂ, ಬಿಬಿಎಂಪಿ ಆವರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ಮಾಡಿದ್ದು ಏಕೆ?ಎಂದು ಪೊಲೀಸ್ ಅಧಿಕಾರಿಗಳು ಗುತ್ತಿಗೆದಾರರನ್ನು ಪ್ರಶ್ನಿಸಿದರು. ಬಳಿಕ ಪ್ರತಿಭಟನಾಕಾರರನ್ನು ಬಂಧಿಸಿ ಬೇರೆಡೆಗೆ ಕರೆದೊಯ್ಯಲಾಯಿತು.
ಹೋರಾಟವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿರುವ ಸಂಘವು, ಮಂಗಳವಾರ ಪಾಲಿಕೆ ಆಡಳಿತಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸುವವರಿದ್ದಾರೆ. ಬುಧವಾರದಿಂದ ಫ್ರೀಡಂ ಪಾರ್ಕ್‌ನಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲಿದ್ದಾರೆ. ಇದಕ್ಕೆ ರಾಜ್ಯ ಗುತ್ತಿಗೆದಾರರ ಸಂಘವು ಬೆಂಬಲ ನೀಡಲಿದೆ ಎಂದು ನಂದಕುಮಾರ್ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಎಂ.ರವೀಂದ್ರ, ಚಿಕ್ಕಹೊಂಬಯ್ಯ, ಹನುಮಂತಯ್ಯ, ಬಿ.ಕೆ.ಸುರೇಶ್, ವಿ.ಮಯೂರ್ ಹಾಗೂ ಇತರರು ಪಾಲ್ಗೊಂಡಿದ್ದರು.