

ಗೋಕರ್ಣ: ಸೃಷ್ಟಿಯ ಸಕಲ ಚರಾಚರಗಳ ಮೂಲ ವಿಜ್ಞಾನವಾಗಿದೆ. ಸಂಶೋಧನೆ, ಪ್ರಯೋಗ ಮತ್ತು ಪರಿವೀಕ್ಷಣೆಯಿಂದ ಮಾತ್ರ ವಿಜ್ಞಾನದಲ್ಲಿ ಅಡಗಿರುವ ಜ್ಞಾನ ಅರಿವಿಗೆ ಬರಲು ಸಾಧ್ಯ ಎಂದು ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ಹೇಳಿದರು.
ಹಿರೇಗುತ್ತಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗೌಪ್ಯವಾಗಿರುವ ವೈಜ್ಞಾನಿಕ ಸತ್ಯಗಳು ಅಷ್ಟು ಸುಲಭವಾಗಿ ಅರಿವಿಗೆ ಬರುವುದಲ್ಲ. ವಿಜ್ಞಾನದ ಒಳಹರವುಗಳನ್ನು ಎಳೆವೆಯಲ್ಲಿಯೇ ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಇಂತಹ ವೈವಿಧ್ಯ ಪೂರ್ಣ ಕಾರ್ಯಕ್ರಮವನ್ನು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸುತ್ತಿದೆ. ಶಿಕ್ಷಕರು ಇದರ ಪೂರ್ಣ ವಿವರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಂತಾಗಲಿ ಎಂದರು.
ಮಾದನಗೇರಿ ಶ್ರೀ ಮಹಾಲಸಾ ಸಿದ್ಧಿ ವಿನಾಯಕ ಮಂದಿರ ಅಧ್ಯಕ್ಷ ಸುನೀಲ ಪೈ ಮಾತನಾಡಿ, ಭಾರತ ಚಂದ್ರಯಾನದಂತಹ ಕೊಡುಗೆಯನ್ನು ವಿಶ್ವಕ್ಕೆ ನೀಡಲು ನಮ್ಮ ವೈಜ್ಞಾನಿಕ ಶಕ್ತಿ ಕಾರಣವಾಗಿದೆ. ಈ ಬಗೆಯ ವೈಜ್ಞಾನಿಕ ಸಾಧನೆಗಳಿಂದ ಭಾರತ ಜಗತ್ತಿಗೆ ಮಾದರಿಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಶಾಂತ ಎನ್. ನಾಯಕ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹೊನ್ನಪ್ಪ ಎನ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ಕುಮಟಾ ಡಯಟ್ ಉಪನ್ಯಾಸಕಿ ಮುಕ್ತಾ ನಾಯಕ, ಆಡಳಿತ ಮಂಡಳಿ ಸದಸ್ಯ ಎನ್.ಟಿ. ನಾಯಕ ಮಾತನಾಡಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ ಎಂ.ಎಚ್. ನಿಶಾ, ಸಾನಿಕಾ ಜೆ.ನಾಯ್ಕ ಮತ್ತು ಸುವರ್ಣ ಭಂಡಾರಕರ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಉದ್ದಂಡ ಬಿ. ಗಾಂವಕರ, ಪ್ರಭಾರ ಪ್ರಾಚಾರ್ಯ ನಾಗರಾಜ ಗಾಂವಕರ, ಶಿಕ್ಷಣ ಸಂಯೋಜಕಿ ಜಯಶ್ರೀ ಪಿ., ಡಯಟ್ ಉಪನ್ಯಾಸಕಿ ವೀಣಾ ನಾಯ್ಕ, ಸಿಆರ್‌ಪಿ ರೋಹಿದಾಸ ನಾಯಕ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ರೋಹಿದಾಸ ಗಾಂವಕರ ಪ್ರಸ್ತಾಪಿಸಿದರು.