ಧರ್ಮಾಚರಣೆ ಮೂಲ ಉದ್ದೇಶ ಭಗವಂತನ ಸಾಕ್ಷಾತ್ಕಾರ

4 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೈನ ಧರ್ಮದಲ್ಲಿ ಸತ್ಯ, ಉತ್ತಮ ನೀತಿ, ನಡವಳಿಕೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇದರ ಮೂಲ ಮಂತ್ರ. ನಮ್ಮ ಹುಟ್ಟು, ಸಾವು ಸುಖ-ದುಃಖಗಳಿಗೆ ಕರ್ಮವೇ ಕಾರಣ ಎಂದು ಶ್ರೀ ಅಮಿತಂಜನ ಮುನಿಮಹಾರಾಜರು ಹೇಳಿದರು.
ನಗರದ ಸನ್ಮತಿ ಜಿನ ಮಂದಿರದಲ್ಲಿ ಧಾರವಾಡದ ಚಾತುರ್ಮಾಸ ಸಮಿತಿ ಮತ್ತು ಜೈನ ಮಿಲನದ ವತಿಯಿಂದ ಭಾನುವಾರ ಆಯೋಜಿಸಿದ್ದ ಪಿಂಚಿ ಪರಿವರ್ತನೆ ಹಾಗೂ ಸಮಯಾನುಸಾರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮೋಕ್ಷ ಸಾಧನೆಗೆ ಸಂಸಾರದ ಬಂಧಗಳಿಂದ ಮುಕ್ತಾರಾಗಬೇಕು. ಅಂದಾಗ ಮಾತ್ರ ಆಧ್ಯಾತ್ಮಿಕ ಸಾಧನೆ ಸಾಧ್ಯ. ಸತ್ಯವು ಅತ್ಯಂತ ಕಠೋರವಾದದು. ಕೇವಲ ಒಬ್ಬ ಮನುಷ್ಯನಿಂದ ಅಥವಾ ವಸ್ತುವಿನಿಂದ ತಿಳಿಯಲು ಸಾಧ್ಯವಿಲ್ಲ. ಅದನ್ನು ಅಧ್ಯಾತ್ಮದ ಮೂಲದಿಂದಲೇ ತಿಳಿಯಲು ಸಾಧ್ಯ. ಬದುಕಿಗೆ ಕೇವಲ ಹಣ, ಆಸ್ತಿ, ಸಂಪತ್ತು ಅಲ್ಲ. ಆಧ್ಯಾತ್ಮಿಕ ಜೀವನವು ನಮಗೆ ಮಾನಸಿಕ ನೆಮ್ಮದಿ ನೀಡುತ್ತದೆ. ಚಾತುರ್ಮಾಸ ಹಾಗೂ ದಶಲಕ್ಷಣ ಪರ್ವದಂತಹ ಆಚರಣೆಗಳು ಆಧ್ಯಾತ್ಮಿಕ ಜೀವನ ಕಂಡಕೊಳ್ಳುವಲ್ಲಿ ಸಹಾಯಕವಾಗುತ್ತವೆ ಎಂದರು.
ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಆಧುನಿಕ ಯುಗಕ್ಕೆ ಮುನಿ ಪರಂಪರೆಯ ಬೆಳಕಿಗೆ ತಂದವರು ಶ್ರೀ ಶಾಂತಿಸಾಗರ ಮಹಾರಾಜರು. ಆ ಕಾಲದಲ್ಲಿ ಮನಿ ಪರಂಪರೆ ಎಷ್ಟೇ ಕಷ್ಟಕರವಾಗಿತ್ತೆಂದರೆ ಒಂದೆಡೆಯಿಂದ ಮತ್ತೊಂದೆಡೆ ಸಂಚಾರ ಮಾಡುವುದೇ ಕಷ್ಟಕರ ವಿಚಾರ. ಆಗ ಚಳವಳಿ ಮೂಲಕ ಜೈನ್ ಮುನಿಗಳು ಎಲ್ಲ ರಾಜ್ಯಗಳಲ್ಲಿ ಸ್ವತಂತ್ರೃಯುತವಾಗಿ ಸಂಚರಿಸಲು ಸರ್ಕಾರದಿಂದ ಆದೇಶವನ್ನು ಹೊರಡಿಸುವಲ್ಲಿ ಶ್ರೀ ಶಾಂತಿಸಾಗರ ಮುನಿಮಹಾರಾಜರು ಸಫಲರಾದರು. ಜೈನ ಮುನಿಮಹಾರಾಜರು ಬರೆದ ಜೈನ ಧರ್ಮದ ಗ್ರಂಥಗಳು ಆಧ್ಯಾತ್ಮದ ಬಗ್ಗೆ ಒಲವು ಮೂಡಿಸುವ ಕೆಲಸ ಮಾಡುತ್ತವೆ ಎಂದರು.
ಮಹಾರಾಜರು ಸಮಯಾನುಸಾರ ಗ್ರಂಥ ಬಿಡುಗಡೆಗೊಳಿಸಿದರು. ವಾಣಿಶ್ರೀ ಪ್ರಸಾದ ಪಿಂಚಿ ಸಮರ್ಪಿಸಿದರು. ಭಾರತಿ ಪಾಟೀಲ ಶಾಸ್ತ್ರ ಅರ್ಪಣೆ ಮಾಡಿದರು.
ಅಶೋಕ ಬಾಗಿ ಅಧ್ಯಕ್ಷತೆ ವಹಿಸಿದ್ದರು. ಡಿ.ಡಿ. ಪಾಟೀಲ, ಇತರರು ಇದ್ದರು. ಅಶೋಕ ಬಾಳಿಕಾಯಿ ಸ್ವಾಗತಿಸಿದರು. ಪಾರ್ಶ್ವನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜೆ. ರಪಾಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net